ಯುವಜನತೆ ಒಳ್ಳೆಯ ಆಲೋಚನೆ ಅಳವಡಿಸಿಕೊಳ್ಳಿ

ರಾಯಚೂರು.ಅ.12- ಇಂದಿನ ಒತ್ತಡದ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಮಾನಸಿಕವಾಗಿ ಒತ್ತಡ ಅನುಭವಿಸುವ ಸಾಧ್ಯತೆಯಿದೆ. ಆದ್ದರಿಂದ ಯುವ ಜನತೆ ಒಳ್ಳೆಯ ಆಲೋಚನೆ ಅಳವಡಿಸಿಕೊಳ್ಳಬೇಕೆಂದು ಸಿಜೆಎಂ ಶ್ರೀನಿವಾಸ ಸುವರ್ಣ ಹೇಳಿದರು.
ಅವರಿಂದು ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸೀಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯ ಸಮಾಜದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.
ಯಾವುದೇ ಒಂದು ಕೆಲಸ ನಿರ್ವಹಿಸುವುದು ಮುಖ್ಯವಲ್ಲ. ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡಿರಬೇಕು. ಯುವ ಜನತೆ ಒಳ್ಳೆಯ ವಿಚಾರಗಳೆಡೆ ಗಮನ ನೀಡಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕು ಕಲ್ಪಿಸಲಾಗಿದೆ. ಅದನ್ನು ಸರಿಯಾಗಿ ಬಳೆಸಿಕೊಳ್ಳಬೇಕು. ಜನರು ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡು ಜೀವನ ನಡೆಸಬಾರದು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲು ಸೀಮಿತವಾಗಿರಬೇಕೆಂದರು.
ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಂ.ಸಿ. ನಾಡಗೌಡ ಮಾತನಾಡಿ, ಮಾನಸೀಕ ಅಸ್ವಸ್ಥತೆ ಎಲ್ಲರಲ್ಲಿಯೂ ಸಾಮಾನ್ಯವಾದುದು. ಆದರೆ, ಹೆಚ್ಚಿನ ಮಾನಸೀಕ ಅಸ್ವಸ್ಥತೆಯಲ್ಲಿರುವ ವ್ಯಕ್ತಿಯನ್ನು ಹುಚ್ಚ ಎಂದು ಕರೆಯುವ ಸಂಭವವಿದೆ. ಕಾರಾಗೃಹದಲ್ಲಿ ಆರೋಪಿ ಸ್ಥಾನದಲ್ಲಿದ್ದು, ನ್ಯಾಯಾಲಯವು ತೀರ್ಪು ಪ್ರಕಟಿಸುವ ಮುಂಚೆಯೇ ತಾವು ಅಪರಾಧಿಯೆಂದು ಭಾವಿಸುವುದು ಮಾನಸೀಕವಾಗಿ ಕುಗ್ಗುವುದಕ್ಕೆ ಕಾರಣವಾಗಿದೆ.
ನ್ಯಾಯಾಲಯವು ತೀರ್ಪು ಪ್ರಕಟವಾಗುವವರೆಗೂ ತಾವು ಅಪರಾಧಿಯಲ್ಲ. ಎನ್ನುವ ಅಂಶ ತಿಳಿದುಕೊಂಡಿರಬೇಕು. ನ್ಯಾಯಾಲಯವು ಅಪರಾಧಿಯೆಂದು ತೀರ್ಪು ಪ್ರಕಟಿಸಿದಾಗ ಉಚ್ಛ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನು ಅವಕಾಶ ಕಲ್ಪಸಿದೆ. ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಾಗ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಂ. ಶಹಬುದ್ದೀನ್ ಕಾಲೇಖಾನ್, ಜಿಲ್ಲಾ ನ್ಯಾಯಾಧೀಶ ಸಂಘದ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಮಾನಸೀಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ನಂದಿತಾ ಎಂ.ಎನ್. ಮನೋ ವೈದ್ಯ ಡಾ. ಮನೋಹರ್ ವೈ.ಪತ್ತಾರ ಅವರು ವಿಷಯ ಮಂಡಿಸಿದರು. ನಾಗರಾಜ ನಿರೂಪಿಸಿದರು. ಜಿಲ್ಲಾ ಕಾರಾಗೃಹ ಸಿಬ್ಬಂದಿಗಳು ಹಾಗೂ ಖೈದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment