ಯುವಕ ಹಾಗೂ ಅವಿವಾಹಿತ ಯುವತಿ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ, ಏ.೧೬- ವಿವಾಹಿತ ಯುವಕ ಹಾಗೂ ಅವಿವಾಹಿತ ಯುವತಿ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ನಗರ ವ್ಯಾಪ್ತಿಯ ನಡುಮನೆ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ರೆಂಕೆದಗುತ್ತು ನಿವಾಸಿ ಕಿರಣ್ ಶೆಟ್ಟಿ (೩೨) ಹಾಗೂ ಲಾಲ ಪುತ್ರಬೈಲು ನಿವಾಸಿ ಸಂಗೀತ (೨೦)ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಿರಣ್ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೂಡಿಗೆರೆ ಬಣಕಲ್ ನಿವಾಸಿ ಲವೀನ ಎಂಬಾಕೆಯನ್ನು ಪ್ರೇಮಿಸಿ ವಿವಾಹವಾಗಿದ್ದನು. ಈ ಹಿಂದೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿ ಬಳಿಕ ವಿಚ್ಚೇದನಗೊಂಡಿದ್ದನು. ಇದೀಗ ಇನ್ನೊಬ್ಬ ಯುವತಿ ಸಂಗೀತ ಎಂಬಳನ್ನು ಪ್ರೇಮಿಸಿ ತನ್ನ ಮನೆಯಲ್ಲಿ ವಾಸವಾಗಿದ್ದು ಇದರಿಂದ ಕುಟುಂಬದೊಳಗೆ ಕಲಹಗಳು ನಡೆಯುತ್ತಿದ್ದು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗ್ಯಾರೇಜ್‌ನಲ್ಲಿ ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಈತ ಮನೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಇತ್ತೀಚೆಗೆ ಈತನ ಸಹೋದರಿಯ ಮದುವೆಯಾಗಿದ್ದು ಮದುವೆ ದಿನ ಮಾತ್ರ ಮನೆಗೆ ಹೋಗಿದ್ದ. ಉಳಿದಂತೆ ಬೇರೆಯಾಗಿಯೇ ವಾಸವಾಗಿದ್ದ ಈತ ಕಳೆದ ಎರಡು ತಿಂಗಳ ಹಿಂದೆ ಬಣಕಲ್ ನಿವಾಸಿ ಲವಿನಾ ಎಂಬಕೆಯನ್ನು ವಿವಾಹವಾಗಿದ್ದು ಬೆಳ್ತಂಗಡಿ ನಗರ ವ್ಯಾಪ್ತಿಯ ನಡುಮನೆ ಎಂಬಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದ. ಮದುವೆಯಾದ ಬಳಿಕ ಲಾಲ ಪುತ್ರಬೈಲು ನಿವಾಸಿ ಸಂಗೀತ ಎಂಬವರನ್ನು ಪ್ರೀತಿಸಿದ್ದು ಈಕೆಯನ್ನು ಮದುವೆಯಾಗುವ ಸಂಚುರೂಪಿಸಿದ್ದ ಆದರೆ ಈತನ ಎರಡನೇ ಪತ್ನಿ ಇದಕ್ಕೆ ವಿರೋಧ ಮಾಡಿದ್ದರಿಂದ ಈಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಈಕೆಯನ್ನು ಮನೆಗೆ ಕರೆದುಕೊಂಡು ಬರುವ ಬಗ್ಗೆ ಈತನಲ್ಲಿ ವಿಚಾರಿಸಿದಾಗ ನಾನು ಅವಳಿಗೆ ತುಂಬಾ ಉಪಕಾರ ಮಾಡಿದ್ದೇನೆ ಅದಕ್ಕಾಗಿ ನನ್ನ ಮೇಲೆ ವಿಶೇಷ ಅಭಿಮಾನವಿದೆ ಹಾಗಾಗಿ ಮನೆಗೆ ಬರುತ್ತಿದ್ದಾಳೆ ಎಂದು ಸುಳ್ಳು ಹೇಳುತ್ತಿದ್ದ.
ಇದೇ ರೀತಿ ದಿನಕಳೆಯುತ್ತಿದ್ದರು. ಭಾನುವಾರ ರಾತ್ರಿ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು ಆತ ಎರಡನೇ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೈ, ಬಾಯಿಗೆ ಬಟ್ಟೆಯಿಂದ ಕಟ್ಟಿಹಾಕಿದ್ದ ಇದರಿಂದ ತಪ್ಪಿಸಿಕೊಂಡು ಬೆಳ್ತಂಗಡಿ ಪೋಲೀಸ್ ಠಾಣೆಗೆ ತಡರಾತ್ರಿ ದೂರು ನೀಡಲು ಹೋಗಿದ್ದು ಪೋಲೀಸರು ಅವಳನ್ನು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆದರೆ ಈಕೆ ಹೆದರಿ ತನ್ನ ಸಂಬಂದಿಕರ ಮನೆಗೆ ಹೋಗಿದ್ದು ಸೋಮವಾರ ಬೆಳಿಗ್ಗೆ ಬರುವಾಗಲೇ ಈತ ಹಾಗೂ ಇನ್ನೋರ್ವ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಬೆಲ್ತಂಗಡಿ ಎಸ್‌ಐ ರವಿ ಡಿ.ಎಸ್ ಭೇಟಿ ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Comment