ಯುವಕರ ಶೈಕ್ಷಣಿಕ, ರಾಜಕೀಯ ಪ್ರಗತಿಗೆ ಕರೆ

ತುಮಕೂರು, ಸೆ. ೧೧- ಒಕ್ಕಲಿಗ ಸಮಾಜದಲ್ಲಿ ಯುವಕರು ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಅವಕಾಶ ಕಲ್ಪಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.

ಇಲ್ಲಿನ ಸದಾಶಿವನಗರದಲ್ಲಿರುವ ಎಸ್.ಜಿ.ಆರ್.ಪ್ರೈಮರಿ ಮತ್ತು ಪ್ರೌಢಶಾಲಾ ಆವರಣದಲ್ಲಿ ಶ್ರೀನಾಡಪ್ರಭು ಕೆಂಪೇಗೌಡರ ಅಭಿಮಾನಿ ಬಳಗದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಅವಕಾಶಗಳನ್ನು ಕಲ್ಪಿಸದಿದ್ದರೆ ಭವಿಷ್ಯದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಉತ್ತಮ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಅಧಿಕಾರ ಮಾಡುತ್ತಿದ್ದರು. ಕೆಲವರು ಪದೇ ಪದೇ ಅಡ್ಡಗಾಲು ಹಾಕುವ ಮೂಲಕ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ದ ಸಮುದಾಯದ ಯುವ ಜನತೆ ಒಂದಾಗಿ, ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು. ಒಕ್ಕಲಿಗ ಸಮುದಾಯದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆದು, ಗಣ್ಯ ವ್ಯಕ್ತಿಗಳಾಗಿ ಬದುಕುವಂತೆ ಮಾಡಬೇಕು ಎಂದು ಕರೆ ನೀಡಿದರು.

ನಿವೃತ್ತ ಪ್ರಾಂಶುಪಾಲರಾದ ಎಂ.ಕೆ. ಮೃತ್ಯಂಜಯ ಮಾತನಾಡಿ, ಆದಿಚುಂಚನಗಿರಿ ಪೀಠದ ದಿ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡ ಹಾಗೂ ಹೆಚ್.ಡಿ. ದೇವೇಗೌಡರು ಒಕ್ಕಲಿಗ ಸಮುದಾಯದ ಮೂರು ಕಣ್ಣುಗಳಿದ್ದಂತೆ. ಈ ಸಮುದಾಯದ ಏಳ್ಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುಲಕಸುಬು ಆಧಾರಿತ ಪೇಟೆಗಳನ್ನು ನಿರ್ಮಿಸುವ ಮೂಲಕ ಎಲ್ಲಾ ದುಡಿಯುವ ವರ್ಗಕ್ಕೆ ಆರ್ಥಿಕ ಲಾಭ ದಕ್ಕುವಂತೆ ಮಾಡಿದ್ದರು. ಅವರ ಜನಪರ ಆಡಳಿತಕ್ಕೆ ಇದು ಕನ್ನಡಿಯಂತೆ ಎಂದರು.

ಬೇರೆ ಸಮುದಾಯಗಳಿಗೆ ಹೋಲಿಕೆ ಮಾಡಿದಲ್ಲಿ ಒಕ್ಕಲಿಗ ಸಮುದಾಯಗಳಲ್ಲಿ ಒಡಕು ಹೆಚ್ಚು. ಅದರಲ್ಲಿಯೂ ರಾಜಕೀಯ ವಿಚಾರದಲ್ಲಿ ಒಗ್ಗೂಡಿ ಕೆಲಸ ಮಾಡದಿರುವ ಕಾರಣ ಹಲವು ಹಿನ್ನಡೆಗಳನ್ನು ಅನುಭವಿಸುವಂತಾಗಿದೆ. ಇದೇ ರೀತಿಯ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳಿಂದ ತುಳಿತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಹೇಮಾವತಿ ನಾಲಾ ವಲಯದ ವಿಶೇಷ ಭೂ ಸ್ವಾಧೀನಾಧಿಕಾರಿ ಆರತಿ ಆನಂದ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಎಲ್ಲ ವಿಚಾರಕ್ಕೂ ನಕಾರಾತ್ಮಕ ಧೋರಣೆಯೇ ಹೆಚ್ಚು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕಾಲದಲ್ಲಿಯೂ ನಮ್ಮ ಸಮುದಾಯದ ಅನೇಕರು ಒಳ್ಳೆಯ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಕ್ಕೆ ನಾನೇ ಜೀವಂತ ಉದಾಹರಣೆ .ಆದರೆ ಇಂದು ಎಲ್ಲವನ್ನು ನೀಡಿದ್ದರೂ ವಿದ್ಯಾರ್ಥಿಗಳು ನನ್ನ ಕೈಯಿಂದ ಸಾಧ್ಯವೇ ಎಂಬಂತೆ ಮಾತನಾಡುತ್ತಾರೆ. ದೃಢ ಸಂಕಲ್ಪ ಮಾಡಿದರೆ ಏನನ್ನಾದರೂ ಸಾಧಿಸಬಹುದು. ಕೀಳರಿಮೆ ಬಿಟ್ಟು, ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆಂಪೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಸಿ. ಕೆಂಪರಾಜು ವಹಿಸಿದ್ದರು. ಎಸ್.ಜಿ.ಆರ್. ವಿದ್ಯಾಸಂಸ್ಥೆ ಅಧ್ಯಕ್ಷ ದೇವೇಗೌಡ, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ. ವೀರಯ್ಯ, ಡಿವೈಎಸ್‌ಪಿ ಬಿ.ಬಿ.ಲಕ್ಷ್ಮಣ್‌ಗೌಡ, ಕೆಂಪೇಗೌಡ ಅಭಿಮಾನಿ ಬಳಗದ ಗೌರವಾಧ್ಯಕ್ಷ ಟಿ. ಜಯಣ್ಣ, ಉಪಾಧ್ಯಕ್ಷ ಬಿ.ಎನ್. ವೆಂಕಟೇಶ್, ಕಾರ್ಯದರ್ಶಿ ರಮೇಶ್, ಹರಕುಮಾರ್, ಹೆಚ್.ಪಿ. ಲೀಲಾವತಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತದ 10 ಜನ ಪ್ರಮುಖ ದೇಹದಾರ್ಢ್ಯ ಪಟುಗಳಲ್ಲಿ 7ನೇಯವರಾಗಿರುವ ಹರಿ. ಬಿ., ಅವರನ್ನು ಸನ್ಮಾನಿಸಲಾಯಿತು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Comment