ಯುವಕನ ಶಂಕಾಸ್ಪದ ಸಾವು ಮೃತನ ಮನೆಗೆ ಉಡುಪಿ ಎಸ್‌ಪಿ ಭೇಟಿ

ಉಡುಪಿ, ನ.೧೩- ಬ್ರಹ್ಮಾವರ ಕರ್ಜೆ ಸಮೀಪದ ಹೊಸೂರು ಗ್ರಾಮದ ಹರಾವು ಸಮೀಪದ ಮಡಿಸಾಲು ಹೊಳೆಯಲ್ಲಿ ತೋಟೆ ಹಾಕಿ ಮೀನು ಹಿಡಿಯುವ ವೇಳೆ ಶಂಕಾಸ್ಪದವಾಗಿ ಮೃತಪಟ್ಟ ಕರ್ಜೆ ಕುರ್ಪಾಡಿಯ ಶ್ರೇಯಸ್(೧೯) ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿನ್ನೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತರ ತಾಯಿ ಶೋಭಾ ಹಾಗೂ ತಂದೆ ಸುರೇಶ್ ಸೇರ್ವೆಗಾರ್ ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಎಸ್ಪಿಯವರನ್ನು ಮನವಿ ಮಾಡಿದರು. ಎಸ್ಪಿಯವರು ಮೃತರ ಹೆತ್ತವರಿಂದ ಘಟನೆಗೆ ಸಂಬಂಧಿಸಿ ಮಾಹಿತಿಗಳನ್ನು ಪಡೆದುಕೊಂಡರು.

ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಎಸ್‌ಪಿ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೇಲ್ನೋಟಕ್ಕೆ ಶ್ರೇಯಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡುಬಂದರೂ ಕೆಲವೊಂದು ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರವೇಶ ಮಾಡಿದರೂ ನಾವು ನಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತೇವೆ ಎಂದರು. ಉಡುಪಿ ವಿಭಾಗದ ಡಿವೈಎಸ್ಪಿ ಜೈಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಉಪಸ್ಥಿತರಿದ್ದರು.

Leave a Comment