ಯುವಕನ ಮೇಲೆ ಹಲ್ಲೆಗೈದ ಶಿರಸಿ ಠಾಣಾ ಎಸ್‌ಐ!

ಮಂಗಳೂರು, ಅ.೧೬- ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಶಿರಸಿ ಠಾಣಾ ಎಸ್‌ಐ ಮತ್ತು ಸಿಬ್ಬಂದಿ ನಿಂದಿಸಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದ ಗಾಯಾಳುವಾಗಿರುವ ಯುವಕ ನಗರದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ್ಬಾ ನಗರ ನಿವಾಸಿ ಮುಸನ್ನಿಫ್ ರಾಣೆಬೆನ್ನೂರು (೨೬) ಹಲ್ಲೆಗೊಳಗಾದ ಯುವಕ.

‘ಅ.೧೪ರಂದು ಬೆಳಗ್ಗೆ ೧೧:೩೦ಕ್ಕೆ ಸ್ನೇಹಿತನ ವಾಹನವೊಂದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಶಿರಸಿ ನಗರ ಪೊಲೀಸ್ ಠಾಣೆಗೆ ತೆರಳಿದೆ. ಠಾಣೆಯಲ್ಲಿ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಗಿರೀಶ್ ಭಟ್ ಸಿವಿಲ್ ಡ್ರೆಸ್‌ನಲ್ಲಿದ್ದರು. ನಮಸ್ಕಾರ ಹೇಳಿ, ವಾಹನದ ದಾಖಲೆ ನೀಡುತ್ತಿದ್ದಂತೆ, ನನ್ನ ಮೊಬೈಲ್‌ನ್ನು ಪೊಲೀಸ್ ಅಧಿಕಾರಿ ಕೇಳಿದರು. ಅವರ ಕೈಗೆ ಕ್ಷಣಮಾತ್ರದಲ್ಲೇ ಮೊಬೈಲ್ ಕೊಟ್ಟೆ. ಮೊಬೈಲ್ ವಶಕ್ಕೆ ಪಡೆದು ಮೇಲ್ಮಹಡಿಗೆ ಹೋದವರು ಸುಮಾರು ೧೦ ನಿಮಿಷ ಕಳೆದರೂ ವಾಪಸಾಗಲಿಲ್ಲ. ಮೇಲ್ಮಹಡಿ ಪ್ರವೇಶಿಸಿ ಮೊಬೈಲ್ ಕೇಳಿದಾಗ ನಿಂದಿಸಿ, ಹಲ್ಲೆ ನಡೆಸಿದರು’ ಎಂದು ಹಲ್ಲೆಗೊಳಗಾದ ಮುಸನ್ನಿಫ್ ರಾಣೆಬೆನ್ನೂರು ಆರೋಪಿಸಿದ್ದಾರೆ.

‘ಹಲ್ಲೆಯಿಂದ ಸ್ಥಳದಲ್ಲೇ ತೀವ್ರ ಅಸ್ತವಸ್ಥಗೊಂಡೆ. ಬಳಿಕ ಪೊಲೀಸರು ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಗೆ ಜೀಪ್‌ನಲ್ಲಿ ಕರೆದೊಯ್ದು ನನ್ನ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಲ್ಲದೆ, ಆರು ತಿಂಗಳ ಹಿಂದೆ ಶಿರಸಿಯ ಕೋಟೆಕೆರೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆಯೂ ಮತ್ತೊಂದು ಕೇಸು ದಾಖಲಿಸಿದ್ದಾರೆ. ಆ ಘಟನೆಗೂ ನನಗೂ ಸಂಬಂಧವಿಲ್ಲ’ ಎಂದು ಮುಸನ್ನಿಫ್ ಹೇಳಿದ್ದಾರೆ. ನನ್ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸದೇ ತಹಶೀಲ್ದಾರ್ ಕೋರ್ಟ್‌ಗೆ ಹಾಜರುಪಡಿಸಿದರು. ನ್ಯಾಯಮೂರ್ತಿಯವರಲ್ಲಿ ಪೊಲೀಸರು ನಡೆಸಿದ ಹಲ್ಲೆ ಬಗ್ಗೆ ವಿವರಿಸಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿದರು. ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಸಂತ್ರಸ್ತ ದೂರಿದ್ದಾರೆ.

Leave a Comment