ಯುವಕನ ಕೊಲೆ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ

ಬೆಂಗಳೂರು,ಡಿ.೨೭-ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಜಗಳದ ದ್ವೇಷದಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ಶ್ರೀರಾಂಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ದೀಪಾಂಜಲಿ ನಗರದ ಮಂಜುನಾಥ್ (೨೫ )ನನ್ನು ಶ್ರೀರಾಂಪುರದ ಲಕ್ಷ್ಮಿನಾರಾಯಣಪುರ ಬಸ್‌ನಿಲ್ದಾಣದ ಬಳಿ ನಿನ್ನೆ ರಾತ್ರಿ ೯.೪೫ರ ವೇಳೆ ಐದಾರು ಮಂದಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದು ಅವರ ಸುಳಿವು ಪತ್ತೆ ಹಚ್ಚಿರುವ ಪೊಲೀಸರು ಬಂಧನಕ್ಕೆ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.
ಸಿಸಿ ಟಿವಿ ಕ್ಯಾಮಾರ ಅಳವಡಿಸುವ ಕೆಲಸ ಮಾಡುತ್ತಿದ್ದ ಮಂಜುನಾಥ್ ಶ್ರೀರಾಂಪುರಕ್ಕೆ ಬಂದಿದ್ದ ವೇಳೆ ಮಾತನಾಡಬೇಕೆಂದು ಆತನನ್ನು ಕರೆದೊಯ್ದು ಗಲಾಟೆ ಮಾಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಿಂಬದಿಯಿಂದ ದುಷ್ಕರ್ಮಿಯೊಬ್ಬ ಮಂಜುನಾಥ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ. ಕೂಡಲೇ ಮಂಜುನಾಥ್ ಅಲ್ಲಿಂದ ಓಡಲು ಯತ್ನಿಸಿದ್ದು, ಮತ್ತೊಬ್ಬ ಲಾಂಗ್ ನಿಂದ ತಲೆಗೆ ಹೊಡೆದಿದ್ದಾನೆ.
ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದು ಪರಿಚಯಸ್ಥ ದುಷ್ಕರ್ಮಿಗಳೇ ಹಣಕಾಸಿನ ವಿಚಾರಕ್ಕೆ ಮಂಜುನಾಥ್‌ನನ್ನು ಕೊಲೆ ಮಾಡಿರುವ ಶಂಕೆಯಿದ್ದು ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Leave a Comment