ಯುವಕನ ಅಪಹರಣ ; ರೌಡಿಶೀಟರ್ ತಂಡದ ಕೃತ್ಯ

ವಿಟ್ಲ, ಮಾ.೨೦- ಕಾರಿನಲ್ಲಿ ಬಂದ ರೌಡಿಶೀಟರ್‌ಗಳ ತಂಡಯೊಂದು ಹಾಡಹಗಲೇ ಯುವಕನನ್ನು ಅಪಹರಿಸಿರುವ ಘಟನೆ ವಿಟ್ಲ ಸಮೀಪದ ಒಕ್ಕೆತ್ತೂರು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಕಂಬಳಬೆಟ್ಟು ದರ್ಗಾ ಸಮೀಪದ ನಿವಾಸಿ ಮೋನು ಯಾನೆ ರಝಾಕ್(೩೦) ಅಪಹರಣಗೊಳಗಾದ ಯುವಕ. ಈತ ತನ್ನ ಸ್ನೇಹಿತ ಮನ್ಸೂರ್ ಎಂಬಾತನ ಜತೆಗೆ ಬೈಕಿನಲ್ಲಿ ಒಕ್ಕೆತ್ತೂರು ಕಡೆಗೆ ಕ್ರಿಕೆಟ್ ಆಡಲೆಂದು ತೆರಳಿದ್ದ ವೇಳೆ ಒಕ್ಕೆತ್ತೂರು ಸೇತುವೆ ಬಳಿ ನಿಂತಿದ್ದ ವೇಳೆ ವಿಟ್ಲ ಕಡೆಯಿಂದ ಬಂದ ಆಲ್ಟೋ ಕಾರಿನಲ್ಲಿದ್ದ ಮೂವರ ಪೈಕಿ ಗಾಂಜಾ ಪ್ರಕರಣ ಆರೋಪಿ, ರೌಡಿಶೀಟರ್ ಹನೀಫ್ ಯಾನೆ ಜೋಗಿ ಹನೀಫ್ ಎಂಬಾತ ಮೋನು ಬಳಿ ಬಂದು ಆತನ ಶರ್ಟ್ ಕಾಲರ್ ಪಟ್ಟಿ ಹಿಡಿದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಈ ಸಂದರ್ಭ ಒಪ್ಪದಿದ್ದಾಗ ಹಲ್ಲೆ ನಡೆಸಿದ ತಂಡ ಅಪಹರಿಸಿ ಮಂಗಳೂರು ಕಡೆಗೆ ತೆರಳಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಕ್ಷಣವೇ ಸ್ಥಳೀಯರು ಹಾಗೂ ಮೋನುನ ಸ್ನೇಹಿತರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ತಂಡವನ್ನು ಪತ್ತೆಹಚ್ಚಲು ಹಲವೆಡೆ ಹುಡುಕಾಟ ನಡೆಸಿದ್ದಾರೆ. ಉಪ್ಪಿನಂಗಡಿ ನೆಲ್ಯಾಡಿ ಕಡೆಗೆ ಅಪಹರಣಕಾರರ ತಂಡ ತೆರಳಿದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಲ್ಲಿಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಈ ತಂಡ ಕೊಣಾಜೆ, ಗಂಜಿಮಠ ಎಂಬಲ್ಲಿ ಇರುವ ಬಗ್ಗೆ ಮಾಹಿತಿ ದೊರಕಿತ್ತು. ಆದರೆ  ತಂಡ ಕಣ್ಮರೆಯಾಗಿದೆ. ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವೆಡೆ ನಾಕಬಂಧಿ ಅಳವಡಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಮೋನುನ ಸ್ನೇಹಿತ ಮನ್ಸೂರ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಶುಕ್ರವಾರ ರಾತ್ರಿ ಕಂಬಳಬೆಟ್ಟು ದರ್ಗಾ ಬಳಿ ಹಾಗೂ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಹೋಟೆಲ್‌ಯೊಂದರ ಸಮೀಪ ರೌಡಿಶೀಟರ್ ಹನೀಫ್ ಯಾನೆ ಜೋಗಿ ಹನೀಫ್ ಎಂಬಾತನ ಮೇಲೆ ತಂಡಯೊಂದು ಹಲ್ಲೆ ನಡೆಸಿತ್ತು. ಇದರ ಪ್ರತಿಕಾರವಾಗಿ ಈ ಅಪಹರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವು ಸಮಯಗಳ ಹಿಂದೆ ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಜಿಲ್ಲಾ ಎಸ್‌ಪಿ ಭೂಷಣ್ ರಾವ್ ಬೊರಸೆ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಸಿಬ್ಬಂದಿ ದಾಳಿ ನಡೆಸಿ ೧೦೦ ಗ್ರಾಂ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅವರ ಪೈಕಿ ಜೋಗಿ ಹನೀಫ್ ಪ್ರಮುಖ ಆರೋಪಿಯಾಗಿದ್ದ.

Leave a Comment