ಯುಎಸ್ ಓಪನ್: ಸೆಮೀಸ್‌ಗೆ ರಫೆಲ್ ನಡಾಲ್

ನ್ಯೂಯಾರ್ಕ್, ಸೆ ೫- ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ರಫೆಲ್ ನಡಾಲ್ ಅವರು ಯುಎಸ್ ಓಪನ್ ಸೆಮಿಫೈನಲ್‌ಗೆ ಪ್ರವೇಶ ಮಾಡಿದ್ದು, ಗೆಲುವಿನ ಓಟ ಮುಂದುವರೆಸಿರುವ ನಡಾಲ್ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಳ್ಳವ ತವಕದಲ್ಲಿದ್ದಾರೆ.

ಅರ್ಥರ್ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಅದ್ಭುತ ಪ್ರದರ್ಶನ ತೋರಿದ ಸ್ಪೇನ್ ಆಟಗಾರ ೬-೪, ೭-೫, ೬-೨ ಅಂತರದಲ್ಲಿ ಡಿಯಾಗೊ ಸ್ಕಡ್ಜಮನ್ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಮೊದಲ ಸೆಟ್‌ನ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ರಫೆಲ್ ೪-೦ ಮುನ್ನಡೆ ಸಾಧಿಸಿದರು. ನಂತರ, ಪುಟಿದೆದ್ದ ಸ್ಕಡ್ಜಮನ್ ೪-೪ ಸಮಬಲ ಸಾಧಿಸಿದರು. ಆದರೂ, ಧೃತಿಗೆಡದೆ ಅದೇ ಲಯ ಮುಂದುವರಿಸಿದ ನಡಾಲ್ ೬-೪ ಅಂತರದಲ್ಲಿ ಮೊದಲ ಸೆಟ್ ಅನ್ನು ತನ್ನ ಖಾತೆಗೆ ಸೇರಿಸಿಕೊಂಡರು.

ಎರಡನೇ ಸೆಟ್‌ನಲ್ಲೂ ಇಬ್ಬರು ಆಟಗಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅಂತಿಮವಾಗಿ ನಡಾಲ್ ಕೇವಲ ಒಂದು ಅಂಕದ ಅಂತರದಲ್ಲಿ ೭-೬ ರಲ್ಲಿ ಎರಡನೇ ಸೆಟ್ ತನ್ನದಾಗಿಸಿಕೊಂಡರು. ಸತತ ಎರಡು ಸೆಟ್ಗಳ ಗೆಲುವಿನ ವಿಶ್ವಾಸದಲ್ಲಿದ್ದ ರಫೆಲ್ ನಡಾಲ್ ಅವರು ಮೂರನೇ ಸೆಟ್ನಲ್ಲಿ ಗೆಲುವಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ೬-೨ ಅಂತರದಲ್ಲಿ ಸ್ಕಡ್ಜಮನ್ ವಿರುದ್ಧ ಗೆದ್ದು ಗೆಲುವಿನ ಓಟ ಮುಂದುವರಿಸಿದರು.

ಸೆಮಿಫೈನಲ್ ಹಣಾಹಣಿಯಲ್ಲಿ ನಡಾಲ್ ಅವರು ಇಟಲಿಯ ಮೆಟ್ಟೊ ಬೆರೆಟ್ಟಿನೊ ವಿರುದ್ಧ ಸೆಣಸಲಿದ್ದಾರೆ.  ಈಗಾಗಲೇ ವಿಶ್ವ ಅಗ್ರ ಕ್ರಮಾಂಕದ ಆಟಗಾರರಾದ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಚ್ ಅವರು ಟೂರ್ನಿಯಿಂದ ಹೊರ ನಡೆದಿದ್ದಾರೆ.

Leave a Comment