ಯುಎಸ್ ಓಪನ್ : ಫೆಡರರ್ ಔಟ್, ನಡಾಲ್ ಸೆಮಿಗೆ

ನ್ಯೂಯಾರ್ಕ್, ಸೆ.೭: ಭರ್ಜರಿ ಫಾರ್ಮ್‌ನಲ್ಲಿದ್ದು ೩ನೇ ಯುಎಸ್ ಓಪನ್ ಕಿರೀಟದ ನಿರೀಕ್ಷೆಯಲ್ಲಿದ್ದ ಸ್ವಿಟ್ಸರ್‌ಲ್ಯಾಂಡಿನ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿ ಕೂಟದಿಂದಲೇ ಹೊರನಡೆದಿದ್ದಾರೆ. ಆ ಮೂಲಕ ಟೂರ್ನಿಯ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ ನಡಾಲ್-ಫೆಡರರ್ ಸೆಮಿ ಪೈನಲ್ ಹೋರಾಟದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ.
ಇಲ್ಲಿನ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆಡರರ್, ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ೭-೫, ೩-೬, ೭-೬ (೮), ೬-೪ ಅಂತರದಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದರು. ೨ ಗಂಟೆ ೫೦ ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಕದನದಲ್ಲಿ ಇಬ್ಬರು ಆಟಗಾರರು ಪ್ರತಿಯೊಂದು ಅಂಕಕ್ಕೂ ಸಾಕಷ್ಟು ಬೆವರು ಹರಿಸಿದರು. ಮೊದಲ ಸೆಟ್ ಸೋತ ಫೆಡರರ್ ಎರಡನೇ ಸೆಟ್‌ನಲ್ಲಿ ತಿರುಗಿಬಿದ್ದರು. ೩-೬ ಅಂತರದಲ್ಲಿ ಸೆಟ್ ಗೆದ್ದ ಫೆಡರರ್ ಸಮಬಲ ಸಾಧಿಸಿದರಲ್ಲದೆ ಪಂದ್ಯದಲ್ಲೂ ಹಿಡಿತ ಸಾಧಿಸುವ ಸೂಚನೆ ನೀಡಿದ್ದರು. ೩ನೇ ಸೆಟ್‌ನ ಅರಂಭದಲ್ಲಿ ೩-೦ ಅಂಕಗಳಿಂದ ಹಿಂದಿದ್ದ ಫೆಡರರ್ ಬಳಿಕ ಬಿಗು ಸರ್ವ್ ಮೂಲಕ ೫-೪ ಲೀಡ್ ಪಡೆದು ಇನ್ನೇನು ಸೆಟ್ ಗೆಲ್ಲುವತ್ತ ಮುನ್ನಡೆದಿದ್ದರು. ಆದರೆ ಛಲಬಿಡದೆ ಆಡಿದ ಪೆಟ್ರೋ, ಟ್ರೈ ಬ್ರೇಕರ್‌ವರೆಗೆ ಸಾಗಿದ ಸೆಟ್‌ನಲ್ಲಿ ೭-೬ ಅಂತರದಲ್ಲಿ ಗೆದ್ದು ಮನ್ನಡೆ ಸಾಧಿಸಿದರು.
ಪ್ರೀ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲೂ ೨೪ನೇ ಶ್ರೇಯಾಂಕದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ೫ ಸೆಟ್‌ಗಳ ಜಿದ್ದಾಜಿದ್ದಿ ಹೋರಾಟ ನಡೆಸಿ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. ಮೊದಲೆರಡು ಸೆಟ್ ಕಳೆದುಕೊಂಡರೂ ಸಹ ಡೆಲ್ ಪೊಟ್ರೊ, ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿರುದ್ಧ ಆಮೋಘ ಹೋರಾಟವೊಂದನ್ನು ಜಾರಿಯಲ್ಲಿರಿಸಿ, ೧-೬, ೨-೬, ೬-೧, ೭-೬ (೭-೧), ೬-೪ ಅಂತರದಿಂದ ಪಂದ್ಯ ಗೆದ್ದಿದ್ದರು. ಮತ್ತೊಂದೆಡೆ ರೋಜರ್ ಫೆಡರರ್ ಜರ್ಮನಿಯ ಫಿಲಿಪ್ ಕೋಹ್ಲಶ್ರೀಬರ್ ವಿರುದ್ಧ ೬-೪, ೬-೨, ೭-೫ ಅಂತರದಿಂದ ನೇರ ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಪ್ರೇವೇಶಿಸಿದ್ದರು.
ಇದಕ್ಕೂ ಮೊದಲು ೨೦೦೯ರ ಯುಎಸ್ ಓಪನ್‌ನಲ್ಲಿ ಫೆಡರರ್-ಡೆಲ್ ಪೊಟ್ರೊ ಮುಖಾಮುಖಿಯಾಗಿದ್ದರು. ಅಂದು ಫೆಡರರ್ ವಿರುದ್ಧ ೩-೬, ೭-೬ (೭-೩), ೪-೬, ೭-೬ (೭-೪), ೬-೨ ಅಂತರದ ಮ್ಯಾರಥಾನ್ ಹೋರಾಟದಲ್ಲಿ ಗೆದ್ದ ೨೦ರ ಹರೆಯದ ಡೆಲ್ ಪೊಟ್ರೊ ಚಾಂಪಿಯನ್ ಆಗಿ ಮೂಡಿ ಬಂದಿದ್ದರು.
ನಡಾಲ್ ಸೆಮಿಗೆ: ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಸುಭವಾಗಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ರಷ್ಯಾದ ಯುವ ಆಟಗಾರ ಆಂಡ್ರೆ ರುಬ್ಲೆ ವಿರುದ್ಧ ೬-೧ ೬-೨ ೬-೨ ಅಂತರದಲ್ಲಿ ನೇರ ಸೆಟ್‌ಗಳಿಂದ ಸುಲಭವಾಗಿ ಪಂದ್ಯ ಗೆದ್ದು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಶುಕ್ರವಾರ ನಡೆಯುವ ಸೆಮಿ ಕದನದಲ್ಲಿ ನಡಾಲ್ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸವಾಲನ್ನು ಎದುರಿಸಲಿದ್ದಾರೆ.

Leave a Comment