ಯಾಸೀನ್ ಕಡೆಗಣಿಸಿ ವಕ್ಫ್ ಅಧ್ಯಕ್ಷ, ಉಪಾಧ್ಯಕ್ಷ ನಾಮಕರಣಕ್ಕೆ ಬಿ.ವಿ.ನಾಯಕ ಶಿಫಾರಸ್ಸು

* ಪತ್ರಕ್ಕೆ ಎನ್.ಎಸ್. ಬೋಸರಾಜು ಸಹಿ : ನಗರ ಕ್ಷೇತ್ರ ರಾಜಕೀಯ ಹಿಡಿತ ಸಾಧಿಸುವ ತಂತ್ರ
ರಾಯಚೂರು.ಜ.12- ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಸೇರಿದಂತೆ ಸದಸ್ಯರ ನೇಮಕಕ್ಕೆ ಸಂಬಂಧಿಸಿ ಸಂಸದ ಬಿ.ವಿ.ನಾಯಕ ಅವರ ಶಿಫಾರಸ್ಸು ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸಂಚಲನಾತ್ಮಕ ವಿವಾದಕ್ಕೆ ಕಾರಣವಾಗಿದೆ.
ಡಿ.17ರಂದು ಸಂಸದ ಬಿ.ವಿ.ನಾಯಕ ಅವರು, ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಹಾಗೂ ಹಜ್ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಒಟ್ಟು 14 ಜನರ ನಾಮಕರಣ ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಶಿಫಾರಸ್ಸು ಪತ್ರಕ್ಕೆ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು ಸಹ ಸಹಿ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ ಹಾಗೂ ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿ ಅವರ ಹೆಸರು ಪತ್ರದಲ್ಲಿದ್ದರೂ, ಇವರು ಇದಕ್ಕೆ ಸಹಿ ಹಾಕಿಲ್ಲ.
ಜಿಲ್ಲಾ ವಕ್ಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ನಗರಸಭೆ ಸದಸ್ಯ ಹಾಗೂ ಹಿರಿಯ ಮುಖಂಡರಾದ ಸೈಯದ್ ಗೌಸ್ ಮೋಹಿನುದ್ದೀನ್ ನವಾಬ್ ಚೌಧರಿ ಅವರನ್ನು ನೇಮಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಷೀರ್ ಅಹ್ಮದ್, ಮಹ್ಮದ್ ಅಬ್ದುಲ್ ಅಜೀಂ, ಗುಲಾಮ್ ಮಹಿಬೂಬ್ ಇವರ ಹೆಸರು ಶಿಫಾರಸ್ಸು ಮಾಡಲಾಗಿದೆ. ಸದಸ್ಯರ ಪಟ್ಟಿಯಲ್ಲಿ ಮೀರ್ಜಾಫಸೀ ಉಲ್ಲಾ ಬೇಗ್, ಶಖೀಲ್, ಬುಡಾನ ಸಾಬ್, ಬಾಬಾ ಜಾನಿ, ಹೈದರ್ ಸಾಬ್, ಏಜಾಜ್, ಬಂದೇ ನವಾಜ್, ಅಹ್ಮದ್ ಸಾಬ್, ಬಾಬಾ ಹಸನ್, ಮೌಲಾ ಸಾಬ್ ಹೆಸರು ಶಿಫಾರಸ್ಸು ಮಾಡಲಾಗಿದೆ.
ಸಂಸದ ಬಿ.ವಿ.ನಾಯಕ ಅವರು ನೀಡಿದ ಈ ಪತ್ರಕ್ಕೆ ಜಮೀರ್ ಅಹ್ಮದ್ ಖಾನ್ ಅವರು ಆದೇಶ ಹೊರಡಿಸುವಂತೆ ಜ.8 ರಂದು ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರಸ್ಸು ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಮಾಜಿ ಶಾಸಕ ಸೈಯದ್ ಯಾಸೀನ್ ಅವರು ತೀವ್ರ ಅಸಮಾಧಾನಗೊಂಡು ನೇಮಕಾತಿ ಪ್ರಕ್ರಿಯೆ ತಡೆಯುವಂತೆ ಸಚಿವರಿಗೆ ಮೋರೆ ಹೋಗಿದ್ದಾರೆಂದು ಹೇಳಲಾಗಿದೆ. ಸಂಸದ ಬಿ.ವಿ.ನಾಯಕ ಅವರ ಪತ್ರಕ್ಕೆ ಆದೇಶ ಹೊರಡಿಸುವಂತೆ ಸಚಿವರು ಸೂಚಿಸಿದ್ದರೂ, ಇನ್ನೂವರೆಗೂ ನೇಮಕ ಆದೇಶ ಪ್ರಕಟಗೊಳ್ಳದಿರುವುದು ಸಚಿವರು, ಯಾಸೀನ್ ಅವರ ಆಕ್ಷೇಪಣೆ ಗಂಭೀರ ಪರಿಗಣಿಸಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಸಂಸದ ಬಿ.ವಿ.ನಾಯಕ ಮತ್ತು ಬೋಸರಾಜು ಅವರ ಶಿಫಾರಸ್ಸು ಪತ್ರ ನೀಡಿರುವುದು ಯಾಸೀನ್ ಅವರ ಬಣದಲ್ಲಿ ಭಾರೀ ಅಸಮಾಧಾನಕ್ಕೆ ದಾರಿ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯಾಸೀನ್ ಅವರ ವಿರುದ್ಧ ಚುನಾವಣಾ ಪ್ರಚಾರದಲ್ಲಿ ತೊಡಗಿದವರಿಗೆ ವಕ್ಫ್ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸ್ಥಾನ ನಾಮಕರಣಕ್ಕೆ ಶಿಫಾರಸ್ಸು ಪತ್ರ ನೀಡಿರುವುದಕ್ಕೆ ಯಾಸೀನ್ ಬಣ ಕೆಂಡಾಮಂಡಲವಾಗಿದೆ.
ರಾಜಕೀಯೇತರ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ವಕ್ಫ್ ಸಮಿತಿ ರಚನೆಗೆ ಸಂಬಂಧಿಸಿ ಸಂಸದ ಬಿ.ವಿ.ನಾಯಕ ಮತ್ತು ಬೋಸರಾಜು ಅವರ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿರುವುದು ಯಾಸೀನ್ ಬಣದಲ್ಲಿ ಆಕ್ರೋಶ ಮುಗಿಲು ಮುಟ್ಟುವಂತೆ ಮಾಡಿದೆ. ಈ ಹಿಂದೆ ಅಲ್ಪಸಂಖ್ಯಾತ ಕಾಂಗ್ರೆಸ್ ಜಿಲ್ಲಾ ಸಮಿತಿ ನೇಮಕಾತಿಯಲ್ಲಿಯೂ ಯಾಸೀನ್ ಅವರನ್ನು ಕಡೆಗಣಿಸಲಾಗಿತ್ತು. ಈಗ ವಕ್ಫ್ ಆಡಳಿತ ಮಂಡಳಿ ನಾಮಕರಣದಲ್ಲಿಯೂ ಕಡೆಗಣಿಸಲಾಗಿದೆ.
ನಗರ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಎಸ್. ಬೋಸರಾಜು ಅವರ ರಾಜಕೀಯ ಹಸ್ತಕ್ಷೇಪ ಏಕೆ ಎನ್ನುವ ಪ್ರಶ್ನೆ ಈಗ ಸಾಮಾನ್ಯಕ್ಕಿಂತ ಗಂಭೀರಗೊಂಡಿದೆ. ಅಲ್ಪಸಂಖ್ಯಾತರ ಸಮುದಾಯದ ಮಾಜಿ ಶಾಸಕರು ಈ ಕ್ಷೇತ್ರದಲ್ಲಿರುವಾಗ ಅವರನ್ನು ಬಿಟ್ಟು ಸಂಸದ ಬಿ.ವಿ.ನಾಯಕ ಅವರು, ಬೋಸರಾಜು ಅವರ ಶಿಫಾರಸ್ಸಿಗೆ ಮನ್ನಣೆ ನೀಡುತ್ತಿರುವುದು ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ ಧೋರಣೆಗೆ ನಿದರ್ಶನವೇ?
ಲೋಕಸಭಾ ಚುನಾವಣೆಯಲ್ಲಿ ಬಿ.ವಿ.ನಾಯಕ ಅವರಿಗೆ ಅಲ್ಪಸಂಖ್ಯಾತರ ಮತ ಬೇಡವೇ? ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಪಸಂಖ್ಯಾತರ ಮಧ್ಯೆ ಯಾಸೀನ್ ಅವರ ಪ್ರಾಬಲ್ಯವಿರುವುದು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ. ಬಿ.ವಿ.ನಾಯಕ ಅವರು ಯಾಸೀನ್ ಅವರನ್ನು ಕಡೆಗಣಿಸಿ, ನಾಮಕರಣಕ್ಕೆ ಶಿಫಾರಸ್ಸು ಮಾಡಿರುವುದು ಲೋಕಸಭಾ ಚುನಾವಣೆ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ನೀ‌ಡಲಾಗಿದೆ.
ಮತ್ತೊಂದು ಕಡೆ ಬೋಸರಾಜು ಅವರ ಬಣ ನಗರ ವಿಧಾನಸಭಾ ಕ್ಷೇತ್ರದ ಮೇಲೆ ಸಂಪೂರ್ಣ ಹಿ‌ಡಿತ ಸಾಧಿಸಲು ಭಾರೀ ರಾಜಕೀಯ ಯತ್ನ ನಡೆಸಿದೆ. ಅತ್ಯಧಿಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಮತಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಪಕ್ಷದ ಪದಾಧಿಕಾರಿಗಳ ನೇಮಕಾತಿ ಮತ್ತು ನಾಮಕರಣ ವಿಷಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾಸೀನ್ ಅವರ ಟಿಕೆಟ್ ತಪ್ಪಿಸಲು ಶತಪ್ರಯತ್ನ ನಡೆಸಲಾಯಿತು. ಆದರೆ, ಕೊನೆಘಳಿಗೆಯಲ್ಲಿ ಈ ಕ್ಷೇತ್ರ ಬೋಸರಾಜು ಅಥವಾ ಅವರ ಬಣಕ್ಕೆ ಕೈತಪ್ಪಿರುವುದು ತಿಳಿಯದ ಸಂಗತಿಯೇನಲ್ಲ. ಇಲ್ಲಿವರೆಗೂ ನಡೆದ ಆರು ಚುನಾವಣೆಗಳಲ್ಲಿ ಯಾಸೀನ್ ಅವರು ನಾಲ್ಕು ಚುನಾವಣೆಗಳಲ್ಲಿ ಪರಾಭವಗೊಂ‌ಡಿರುವುದನ್ನು ಆಧಾರವಾಗಿಸಿಕೊಂಡು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆಸಲು ವೇದಿಕೆಯನ್ನಾಗಿ ವಕ್ಫ್ ಸೇರಿದಂತೆ ಇತರೆ ಅಲ್ಪಸಂಖ್ಯಾತರ ನಾಮಕರಣಗಳಲ್ಲಿ ಬೋಸರಾಜು ಅವರು ಪ್ರಮುಖ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಯಾಸೀನ್ ಬಣದ ಮೂಲ ಆರೋಪವಾಗಿದೆ.
ಆದರೆ, ಇತ್ತೀಚಿಗೆ ನಡೆದ ನ್ಯೂ ಎಜ್ಯುಕೇಷನ್ ಸೊಸೈಟಿ ಚುನಾವಣೆಯಲ್ಲಿ ಯಾಸೀನ್ ಅವರ ಪೆನಾಲ್ ಅತಿ ಹೆಚ್ಚಿನ ಸದಸ್ಯರ ಗೆಲುವು ಅಲ್ಪಸಂಖ್ಯಾತರ ಮಧ್ಯೆ ಅವರ ಹಿಡಿತಕ್ಕೆ ನಿದರ್ಶನವಾಗಿದ್ದರೂ, ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಮೂಲೆ ಗುಂಪಾಗಿಸುವ ಪ್ರಯತ್ನ ಗಂಭೀರ ನಡೆಯುತ್ತಿವೆ. ಇದಕ್ಕೆ ಸಂಸದ ಬಿ.ವಿ.ನಾಯಕ ಅವರು ಕೈ ಜೋಡಿಸಿದ್ದಾರೆ ಎನ್ನುವುದು ವಕ್ಫ್ ಆಡಳಿತ ಮಂಡಳಿ ನಾಮಕರಣ ಶಿಫಾರಸ್ಸು ಸಾಕ್ಷಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪ‌ಡೆಯಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

Leave a Comment