ಯಾವ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ : ಕೆ.ಬಿ.ಶಾಣಪ್ಪ

 

ಕಲಬುರಗಿ,ಮಾ.15-“ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ” ಎಂದು ಹೇಳುವುದರ ಮೂಲಕ ಮಾಜಿ ಸಚಿವ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಯೆಳೆದಿದ್ದಾರೆ.

“ಸಂಜೆವಾಣಿ”ಯೊಂದಿಗೆ ಮಾತನಾಡಿದ ಅವರು, “ನನಗೀಗ 82 ವರ್ಷ ವಯಸ್ಸಾಗಿದೆ. ಯಾವ ಪಕ್ಷಕ್ಕೆ ಸೇರ್ಪಡೆಯಾಗಿ ಏನು ಮಾಡಲಿ. ಕಮ್ಯುನಿಸ್ಟ್, ಲೋಕಜನಶಕ್ತಿ, ಬಿಜೆಪಿ ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಇರಾದೆ ನನಗಿಲ್ಲ” ಎಂದು ಹೇಳಿದರು.

ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ಪಕ್ಷದ ಮುಖಂಡರು ಉಮೇಶ ಜಾಧವ ಅವರನ್ನು ಕಾಂಗ್ರೆಸ್ ನಿಂದ ಕರೆತಂದು ಟಿಕೆಟ್ ನೀಡುತ್ತಿದ್ದಾರೆ. ಇದರಿಂದಾಗಿ ಅಸಮಾಧಾನವಾಗಿರುವುದು ನಿಜ. ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಹೇಳಿದರು.

ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಹೇಳಿರುವ ಕೆ.ಬಿ.ಶಾಣಪ್ಪ ಅವರ ನಡೆ ಏನಾಗಿರಬುಹುದು ಎಂಬುವುದು ಮಾತ್ರ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Leave a Comment