‘ಯಾವುದೇ ಕೆಲಸ ಕಷ್ಟವಲ್ಲ, ಇಷ್ಟವಾಗಬೇಕು’

ಉಜಿರೆ, ಆ.೧- ಜ್ಞಾನದ ಮೂಲ ಮನಸ್ಸಿನ ಅಂತರಾಳದಲ್ಲಿ ಸುಪ್ತವಾಗಿರುತ್ತದೆ. ಏಕಾಗ್ರತೆಯಿಂದ ಆಳವಾದ ಚಿಂತನ -ಮಂಥನದಿಂದ ಪರಿಶುದ್ಧ ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ-ಸಾಮರ್ಥ್ಯ ನಮ್ಮಲ್ಲಿ ಮೂಡಿ ಬರುತ್ತದೆ. ಯಾವುದೇ ಕೆಲಸ ಕಷ್ಟವಲ್ಲ, ಇಷ್ಟವಾಗಬೇಕು ಎಂದು ಮಂಗಳೂರಿನ ಶ್ರೀರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ನಿನ್ನೆ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ಪ್ರಕಟಿಸಲಾದ “ಜ್ಞಾನ ಗಂಗೆ” ಮತ್ತು “ಜ್ಞಾನ ತುಂಗೆ” ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶಾಲೆಯಲ್ಲಿ ಪಡೆಯುವ ಅಪರ ವಿದ್ಯೆಯಿಂದ ನಮ್ಮ ಬೌದ್ಧಿಕ ವಿಕಾಸವಾದರೆ ಮನಸ್ಸನ್ನು ಹದಗೊಳಿಸಿ ಪರಿಶುದ್ಧ ಮಾಡುವ ಪರ ವಿದ್ಯೆಯಾದ ಆಧ್ಯಾತ್ಮಿಕ ಶಿಕ್ಷಣದಿಂದ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ.
ಯಾವುದೇ ಕೆಲಸವನ್ನು ತಲ್ಲೀನರಾಗಿ ಸಂತೋಷದಿಂದ ಮಾಡಬೇಕು. ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಬೇಕು. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ದೇವರ ಪ್ರಾರ್ಥನೆ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಧ್ಯೇಯವಾಗಿದ್ದು, ಶಿಕ್ಷಣದೊಂದಿಗೆ ಮಾನವೀಯತೆ ಮರೆಯಬಾರದು. ಅಹಂಕಾರವನ್ನು ತ್ಯಜಿಸಿ ಪರಸ್ಪರ ಪ್ರೀತಿ-ವಿಶ್ವಾಸ, ಗೌರವದೊಂದಿಗೆ ಹೊಂದಾಣಿಕೆಯ, ಸಹಬಾಳ್ವೆಯ ಬದುಕು ನಡೆಸುವ ಜೀವನಪಾಠ ಕಲಿಯಬೇಕು. ಸಮಾನತೆಯ ಹೆಸರಿನಲ್ಲಿ ಮಾನವೀಯ ಮೌಲ್ಯ ಕಳೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು. ಪರೀಕ್ಷೆಗಳಲ್ಲಿ ಶೇ. ೧೦೦ ಅಂಕಗಳಿಸಿದವರೂ ನಿಜ ಜೀವನದಲ್ಲಿ ಅನೇಕ ಬಾರಿ ಸೋಲನ್ನು ಅನುಭವಿಸುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಶಾಂತಿವನದಿಂದ ಪ್ರಕಟಿಸಲಾದ ಪುಸ್ತಕಗಳಲ್ಲಿ ಸಾರ್ಥಕ ಬದುಕಿಗೆ ಪೂರಕವಾದ ಮೌಲಿಕ ಸಂದೇಶ ನೀಡಲಾಗಿದೆ ಎಂದು ಹೇಳಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ಉಪಸ್ಥಿತರಿದ್ದರು.
ಯೋಗ ನಿರ್ದೇಶಕ ಐ. ಶಶಿಕಾಂತ ಜೈನ್ ಸ್ವಾಗತಿಸಿದರು. ಅಶೋಕ ಸಿ. ಪೂಜಾರಿ ಧನ್ಯವಾದವಿತ್ತರು. ಶೇಖರ ಕಡ್ತಲ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:
ಶಾಂತಿವನ ಟ್ರಸ್ಟ್ ವತಿಯಿಂದ ಕಳೆದ ೨೫ ವರ್ಷಗಳಲ್ಲಿ ೪೪ ಪುಸ್ತಕಗಳ ಒಂದು ಲಕ್ಷ ಪ್ರತಿಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.
ಖ್ಯಾತ ಕಲಾವಿದ ವಿಲಾಸ್ ನಾಯಕ್, ಆದರ್ಶ ಗೋಖಲೆ, ಕು. ಕಾವ್ಯಶ್ರೀ ಅಜೇರು ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಸದುಪಯೋಗ ಪಡೆದ ಪ್ರತಿಭಾವಂತರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಯಬೇಕು ಯಾವುದೇ ಕೆಲಸವನ್ನು ಸಂತೋಷದಿಂದ ಮಾಡಬೇಕು.
ನಿತ್ಯವೂ ದೇವರ ಪ್ರಾರ್ಥನೆ, ಧ್ಯಾನ ಮಾಡಬೇಕು.
ಪ್ರತಿಯೊಂದು ಮಗುವೂ ಕುಟುಂಬದ ಅಮೂಲ್ಯ ಸಂಪತ್ತು.
ಶಿಕ್ಷಣದೊಂದಿಗೆ ಬದುಕುವ ಕಲೆ ಕರಗತ ಮಾಡಿಕೊಳ್ಳಬೇಕು.
ಜೀವನದಲ್ಲಿ ಪ್ರೀತಿ-ವಿಶ್ವಾಸ ಮತ್ತು ಹೊಂದಾಣಿಕೆ ಅಗತ್ಯ.

Leave a Comment