ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ

ಹನೂರು: ಜ.17- ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಿನ ತಮ್ಮ ವೃತ್ತಿ ಬದುಕಿನಲ್ಲಿ ಶ್ರದ್ಧ ಭಕ್ತಿಯಿಂದ ಕರ್ತವ್ಯ ನಿರ್ವಹಿಸಿ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ. ರೋಗಿಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡಿ ಎಂದು ಮೈಸೂರು ಸಂತ ಫಿಲೋಮಿನ್ಸ್ ಫಾರ್ಮರ್ ಕಾಲೇಜಿನ ಪ್ರಿನ್ಸಿಪಾಲ್ ಫಾದರ್ ಲೆಸ್ಲಿ ಮೊರಾಸ್ ಸಲಹೆ ನೀಡಿದರು.
ಹನೂರು ಸಮೀಪದ ಹೋಲಿ ಕ್ರಾಸ್ ಸ್ಕೂಲ್ ಆಫ್ ನರ್ಸಿಂಗ್ 20ನೇ ಬ್ಯಾಚ್ ನ ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಪ್ರಾಪ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರೋಗಿಗಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ದಾದಿಯರ ಪಾತ್ರ ಬಹು ಮುಖ್ಯವಾಗಿದ್ದು, ಅವರ ಸೇವೆ ದೇಶ ಸೇವೆಯಾಗಿದೆ ಎಂದು ಬಣ್ಣಿಸಿದ ಅವರು ಆಧುನಿಕ ಜೀವನ ಶೈಲಿಯ ಈ ದಿನಮಾನಸಗಳಲ್ಲಿ ಬಡವ ಬಲ್ಲಿದರು ಎನ್ನದೆ ಅನೇಕ ರೀತಿಯ ಖಾಯಿಲೆಗಳು ಮಾನವನ ಮೇಲೆ ಎರುಗುತ್ತಿವೆ. ಇಂತಹ ಸಂದರ್ಭದಲ್ಲಿ ರೋಗಿಗಳ ಆರೋಗ್ಯವನ್ನು ಗುಣಪಡಿಸಲು ವೈದ್ಯರ ಸಲಹೆಯಂತೆ ದಾದಿಯರು ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಬಹಳ ದೊಡ್ಡದು. ದೇಶದಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಂಡು ನಿರುದ್ಯೋಗ ತಾಂಡವಾಡುತ್ತಿದೆ ಎನ್ನುತ್ತಿರುವ ಈ ಸ್ಥಿತಿಯಲ್ಲೂ ನರ್ಸಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗವಿದೆ. ನರ್ಸಿಂಗ್ ವೃತ್ತಿಯಲ್ಲಿ ತೊಡಗಿರುವವರು ಇಂದು ಒಂದು ಕುಟುಂಬವನ್ನು ನಿರ್ವಹಣೆ ಮಾಡುವಷ್ಟು ಸಬಲರಾಗಿದ್ದಾರೆ. ಹೋಲಿಕ್ರಾಸ್ ಸಂಸ್ಥೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಪಠ್ಯೇ ಹಾಗೂ ಪಠ್ಯೇತರ ವಿಷಯಕ್ಕೆ ಸೀಮಿತವಾಗದೆ ಮಾನವೀಯ ಮೌಲ್ಯಗಳಿಗೆ ಒತ್ತನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಗೆರೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಿಯಶಂಕರ್ ಮಾತನಾಡಿ, ದೇಶದಲ್ಲಿ ನಿರೀಕ್ಷಿತ ಜೀವಿತ ಅವಧಿಯಲ್ಲಿ ಶಿಶು ಮರಣ, ಮಾತೃ ಮರಣ ತಡೆಗಟ್ಟುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಒತ್ತನ್ನು ನೀಡಿದರೆ ಮಾನವ ಅಭಿವೃದ್ಧಿ ಸಾಧ್ಯ. ಈ ದಿಸೆಯಲ್ಲಿ ಹೋಲಿಕ್ರಾಸ್ ಸಂಸ್ಥೆ ಶೈಕ್ಷಣಿಕ ಪ್ರಗತಿ ಜೊತೆಗೆ ಮಾನವರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದೆ. ರೋಗಿಗಳ ಸೇವೆಯನ್ನು ಮಾಡಲು ನರ್ಸಿಂಗ್ ಶಾಲೆಯನ್ನು ಪ್ರಾರಂಭಿಸಿ ನರ್ಸ್‍ಗಳಿಗೆ ತರಬೇತಿ ನೀಡುತ್ತಿರುವುದು ಹೋಲಿಕ್ರಾಸ್ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್: ಪ್ರತಿಭಾನ್ವಿತ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಮನಸೋರೆಗೊಳ್ಳುವಂತೆ ಮಾಡಿತ್ತು. ಕನ್ನಡ ನಾಡು ನುಡಿಯ ಪ್ರೇಮವನ್ನು ಸಾರುವ ಗೀತೆಗೆ ಹೆಜ್ಜೆ. ಹಳ್ಳಿಯ ರೈತ, ಸುಗ್ಗಿಕಾಲ, ಇನ್ನಿತರೆ ಗ್ರಾಮೀಣ ಸೊಗಡಿನ ಸಾರವನ್ನು ಸಾರುವ ಗೀತೆ ಸೇರಿದಂತೆ ಇನ್ನಿತರೆ ಗೀತೆಗಳಿಗೆ ನೃತ್ಯವನ್ನು ಮಾಡುವ ಮೂಲಕ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಕೀಲರಾದ ನಾಗರಾಜು, ಬೆಂಗಳೂರು ಹೋಲಿಕ್ರಾಸ್ ಸಂಸ್ಥೆಯ ವಲ್ಸಾ ಕುಂಬ್ಲಾಂಕಲ್, ಕಾಮಗೆರೆ ಹೋಲಿಕ್ರಾಸ್ ಸಂಸ್ಥೆಯ ಆಡಳಿತಾಧಿಕಾರಿ ಕ್ಯಾಥ್ಲೀನ್, ಫಾದರ್ ಮೈಕಲ್ ಅಗಸ್ಟಿನ್, ಹೋಲಿ ಕ್ರಾಸ್ ಶಾಲೆ ಹಾಗೂ ಕಾಲೇಜಿನ ಸಂಸ್ಥಾಪಕರಾದ ಲೂಸಿಜಾನ್, ಮತ್ತು ಪ್ರಾಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment