ಯಾರೇ ಕೂಗಾಡಲಿ… ನಿಲ್ಲದು ನಮ್ಮ ಅಂದರ್ ಬಾಹರ್…!

ಹುಬ್ಬಳ್ಳಿ, ಜೂ 16: ಎಕ್ಕಾ ರಾಜಾ ರಾಣಿ ನನ್ನ ಕೈಯಲ್ಲಿ, ಹಿಡಿ ಮಣ್ಣು ನಿನ್ನ ಬಾಯಲ್ಲಿ….  ಈ ಹಾಡು ಅಕ್ಷರಶ: ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸತ್ಯವಾಗುತ್ತಿದೆ.
ಹೌದು ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ಅಂಚಟಗೇರಿ, ಬಂಡಿವಾಡ, ಕುಸೂಗಲ್,  ಶಿವಳ್ಳಿ ರಸ್ತೆ, ತಾರಿಹಾಳ ಎಲ್ಲೆಂದರಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಕ್ಕಾ ರಾಜಾ ರಾಣಿಯಾಟ ಎಂಬುದು ಸುತ್ತ ಮುತ್ತಲಿನ ಜನರ ಧಿಕ್ಕಾರದ ಕೂಗಾಗಿದೆ.
ಅಂಚಟಗೇರಿ, ತಾರಿಹಾಳ, ನೂಲ್ವಿ, ಶಿವಳ್ಳಿ, ಕುಸೂಗಲ್ ರಸ್ತೆ, ಬಂಡಿವಾಡ ವ್ಯಾಪ್ತಿಯ ನಿರ್ಜನ ಪ್ರದೇಶಗಳಲ್ಲಿ ಬೆಳ್ಳಂಬೆಳಿಗ್ಗೆ ಆರಂಭವಾಗುವ ಇಸ್ಪೀಟ್ ಜೂಜಾಟ ಅಹೋರಾತ್ರಿ ಕಳೆದರೂ ನಿಲ್ಲದು ಎನ್ನಲಾಗಿದೆ.
ಪೊಲೀಸರ ಕೃಪಾಶೀರ್ವಾದದೊಂದಿಗೆ ನಿತ್ಯ ಗಿರಾಕಿಗಳನ್ನು ಕರೆತಂದು ಈ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಗ್ಯಾಂಬ್ಲಿಂಗ್ ಅಡ್ಡೆಗಳನ್ನು ತೆರೆದಿರುವ ಜೂಜುಕೋರರು ಯಾರೇ ಕೂಗಾಡಲಿ… ಊರೇ ಹೋರಾಡಲಿ…. ನಮ್ಮ ನೆಮ್ಮದಿಗೆ ಭಂಗವಿಲ್ಲ… ಇಸ್ಪೀಟ್ ನಿನಗೆ ಸಾಟಿಯಿಲ್ಲ… ನಮ್ಮನ್ನು ಯಾರೂ ಏನೂ ಮಾಡಲು ಆಗದು ಎಂಬಂತೆ ಅಡ್ಡೆ ನಡೆಸುವ ಜೂಜುಕೋರರು ಎಗ್ಗಿಲ್ಲದೆ ಮುನ್ನುಗ್ಗುತ್ತಿದ್ದಾರೆ ಎಂಬುದು ಅಕ್ಕಪಕ್ಕದ ಹಳ್ಳಿಗರ ಆಕ್ರೋಶಭರಿತ ಮಾತಾಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಗೆ ಧಾರವಾಡ ಎಸ್ಪಿ ಅವರು ಕಡಿವಾಣ ಹಾಕುವರೇನೊ? ಎಂದು ಈ ಹಿಂದೆ ಸಂಜೆವಾಣಿ ಪತ್ರಿಕೆ ಹಲವು ಬಾರಿ ಜೂಜಾಟ ಕುರಿತಂತೆ ವರದಿಗಳ ಮೂಲಕ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಅದರ ಬದಲು ನಿತ್ಯ ಜೂಜುಗಳ ಅಡ್ಡೆಗಳಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗಿದೆ ಮಾತ್ರ.  ಇದಕ್ಕೆ ಕಾರಣ ತಿಂಗಳು ತಿಂಗಳು ಮುಟ್ಟುತ್ತಿರುವ ಮಾಮೂಲು ಕಾರಣವೋ? ಅಥವಾ ಯಾರು ಏನೇ ಮಾಡಿಕೊಂಡರು ನಮಗೆ ಸಂಬಂಧವಿಲ್ಲ ಬಿಡಿ ಎಂಬ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರ ಜಾಣ ಕುರುಡುತನವೋ? ತಿಳಿದುಬರುತ್ತಿಲ್ಲ.

ಮದ್ಯ ಮಾರಾಟ ಬಲು ಜೋರು
ಕೇವಲ ಇಸ್ಪೀಟ್ ಜೂಜಾಟಕ್ಕೆ ಮಾತ್ರ ಹುಬ್ಬಳ್ಳಿ ಗ್ರಾಮೀಣ ಠಾಣೆ ಅಭಯ ಹಸ್ತ ತೋರಿದೆ ಎಂದರೇ ತಪ್ಪಾದೀತು. ಠಾಣಾ ವ್ಯಾಪ್ತಿಯ ಪ್ರತಿ ಗ್ರಾಮಗಳ ಕಿರಾಣಿ ಅಂಗಡಿಗಳಿಂದ ಹಿಡಿದು ರಸ್ತೆ ಪಕ್ಕದಲ್ಲಿರುವ ಸಣ್ಣ ಹೋಟೆಲ್‍ಗಳು, ಡಾಬಾಗಳಲ್ಲೂ ಅಕ್ರಮ ಮದ್ಯದ ಪೊಟ್ಟಣಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ಕೇಳುವವರು ಯಾರೂ ಇಲ್ಲವೇ? ನಮ್ಮ ಮಕ್ಕಳು ನಿತ್ಯ ಮದ್ಯ ಕುಡಿದು ಹಾಳಾಗುತ್ತಿದ್ದಾರೆ ಎಂಬುದು ಠಾಣಾ ವ್ಯಾಪ್ತಿಯ ಗ್ರಾಮಗಳ ಪ್ರಜ್ಞಾವಂತರ ಕೂಗಾಗಿದೆ.
ಸಂಜೆ ಆದರೆ ಸಾಕು, ಪ್ರತಿ ಹಳ್ಳಿಗಳ ಡಬ್ಬಾ ಅಂಗಡಿ, ಸಣ್ಣ ಹೋಟೆಲ್, ಡಾಬಾ ಸೇರಿದಂತೆ ಎಲ್ಲೆಂದರಲ್ಲಿ ಮದ್ಯದ ಹೊಳೆ ಹರಿಯುತ್ತಿರುವುದು ನಿತ್ಯ ಸಾಮಾನ್ಯವಾಗಿದೆ. ಚಿಕ್ಕ ಚಿಕ್ಕ ಹುಡುಗರು ಎಣ್ಣಿ ಹೊಡೆದು ಎಗ್ ರೈಸ್ ತಿಂದು ಬರೋಣ ಬಾ ಎಂದು ಮಾತನಾಡಿಕೊಳ್ಳುವ ದೃಶ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಈ ರೀತಿ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದವರು ಯಾರು? ಇದಕ್ಕೂ ಮಾಮೂಲಾ? ಅಥವಾ ಜಾಣಕುರುಡತನವಾ? ಎಂಬುದೇ ನಿಗೂಢ.
ಈಗಲಾದರೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ದಕ್ಷತೆ ಹಾಗೂ ಬದ್ದತೆಯನ್ನು ತೋರಿ ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂದರ್ ಬಾಹರ್, ಅಕ್ರಮ ಮದ್ಯ ಮಾರಾಟ ಕುರಿತಂತೆ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಜೂಜು ಮತ್ತು ಮದ್ಯದಿಂದ ಮತ್ತಷ್ಟು ಕುಟುಂಬಗಳು ಹಾಳಾಗುವುದರಲ್ಲಿ ಎರೆಡು ಮಾತಿಲ್ಲ!

Leave a Comment