ಯಾಣ

ಅದ್ಭುತ ಅನುಭವದ ಯಾಣ

ಜಲಪಾತಗಳ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕ ವೈವಿಧ್ಯಮಯಗಳ ಬೀಡು. ಮಾಗೋಡು ಜಲಪಾತ, ಸಾತೊಡ್ಡಿ ಜಲಪಾತಗಳಂತೂ ಜೋಗ ಜಲಪಾತವನ್ನು ಮೀರಿಸುವಂತಿವೆ. ಆದರೆ ಇವುಗಳಿಗೆ ಪ್ರಚಾರದ ಕೊರತೆ. ಜಲಪಾತಗಳಲ್ಲದೆ ವಿವಿಧ ಪ್ರಕೃತಿ ಸೃಷ್ಠಿಯ ತಾಣಗಳು ಇಲ್ಲಿವೆ. ಅದರಲ್ಲಿ ಶ್ರೀ ಕ್ಷೇತ್ರ ಯಾಣ ಸಹ ಒಂದು. ಇದು ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಕುತೂಹಲ ಮೂಡಿಸುವಂತಹ ಕ್ಷೇತ್ರ.

ಶ್ರೀ ಕ್ಷೇತ್ರ ಯಾಣ ಎಂದು ಹೆಸರು ಪಡೆದಿರುವ ಭೈರವ ಕ್ಷೇತ್ರ ಅತ್ಯಂತ ಪ್ರಾಚೀನವಾದದ್ದು. ಆದ್ದ ರಿಂದ ಆಧ್ಯಾತ್ಮ ಚಿಂತನೆಗೆ ಯೋಗ್ಯವಾಗಿದೆ. ಈ ಕ್ಷೇತ್ರದ ಕುರಿತು ಪುರಾಣಗಳಲ್ಲಿ ಉಲ್ಲೇಖಗಳಿವೆ. ೧೮ ಪುರಾಣಗಳಲ್ಲೊಂದಾದ ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ವಿಸ್ತೃತ ಮಾಹಿತಿ ಲಭ್ಯ. ಶೈವ ಸಿದ್ಧಾಂತ ಎನ್ನುವ ಗ್ರಂಥದಲ್ಲೂ ಇದರ ಮಾಹಿತಿ ಇದೆ. ಇವುಗಳ ಮಾಹಿತಿಯಿಂದ ಈ ಸ್ಥಳ ಇಂದಿಗೂ ನಿಶ್ಚಲವಾಗಿದೆ.

ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ೧೭ ಕಿ.ಮೀ ದೂರದಲ್ಲಿ ಆನೆಗುಂದಿ ಇದೆ. ಅಲ್ಲಿಂದ ಮುಂದೆ ಸಂಡಳ್ಳಿ ಮಾರ್ಗವಾಗಿ ೧೭ ಕಿ.ಮೀ ಹೋದರೆ ಯಾಣ. ಶಿರಸಿಯಿಂದ ೩೭ ಕಿ.ಮೀ. ದೇವನಹಳ್ಳಿ ಮಾರ್ಗವಾಗಿ ವಡ್ಡಿ ರಸ್ತೆಯಿಂದ ಯಾಣಕ್ಕೆ ಹೋಗಬಹುದು. ಯಾವ ಕಡೆಯಿಂದ ಯಾಣಕ್ಕೆ ಹೋದರೂ ದಟ್ಟ ಅರಣ್ಯದ ನಡುವೆ ಪ್ರಯಾಣಿಸುವುದೇ ಒಂದು ರೀತಿ ರೋಮಾಂಚನ.

ಈ ಕ್ಷೇತ್ರದ ಪ್ರಾಚೀನ ಹೆಸರು ಭೈರವ ಕ್ಷೇತ್ರ. ಯಾಣ ಎನ್ನುವ ಹೆಸರು ಇತ್ತೀಚಿನದ್ದಿರಬಹುದು. ಹೆಚ್ಚೆಂದರೆ ಅಲ್ಲಿಗೆ ಹೋಗುವುದು ಪ್ರಯಾಸಕರವಾಗಿರುವುದರಿಂದ ’ಯಾಣಿ’ ಎಂಬ ಹೆಸರು ಬಂದಿರಬೇಕು. ಅಷ್ಟೇ ಅಲ್ಲದೆ ಈ ಹೆಸರು

ಅನ್ವರ್ಥವೂ ಆಗಿರಬಹುದು. ಯಾಕೆಂದರೆ

ಯಾಣ ಎನ್ನುವ ಶಬ್ಧಕ್ಕೆ ವಾಹನ ಎಂದು ಒಂದರ್ಥ. ಇನ್ನೊಂದು ಅರ್ಥ ಜ್ಞಾನ ಸಾಧನೆಯ ಮಾರ್ಗ ಎಂದಾಗಿದೆ. ಈ ಅರ್ಥ ಈ ಕ್ಷೇತ್ರಕ್ಕೆ

ಹೆಚ್ಚು ಸಮಂಜಸ ಎನಿಸುತ್ತದೆ. ಆದ್ದರಿಂದ ಭೈರವ ಕ್ಷೇತ್ರಕ್ಕೆ ಯಾಣ ಎನ್ನುವ ಹೆಸರೂ ಸಹ ಯೋಗ್ಯವೇ ಆಗಿದೆ. ’ಸೊಕ್ಕಿದವ ಯಾಣಕ್ಕೆ ಹೋಗಬೇಕು’ ಎಂಬ ಗಾದೆಯಿದೆ. ಈ ಹಿನ್ನೆಲೆಯಲ್ಲಿ ಆಲೋಚಿಸಿದರೆ, ಸ್ವಾರಸ್ಯವಾದ ವಿಚಾರ, ಗಮ್ಯ ವಿಚಾರ ಗೋಚರಿಸುತ್ತದೆ. ಪ್ರಯಾಸದ ಪ್ರಯಾಣ ಮಾಡಿ ಯಾಣ ತಲುಪಿದರೆ, ಅದರ ಅನುಭವ ವರ್ಣಿಸಲಸಾಧ್ಯ.

ಯಾಣದ ಪುಣ್ಯಕಥೆ

ಪುರಾಣ ಪ್ರಸಿದ್ಧ ರಾಕ್ಷಸ ಹಿರಣ್ಯಾಕ್ಷನಿಗೆ ರಕ್ತಾಕ್ಷ, ಕೃಷ್ಣಾಕ್ಷ ಎಂಬ ಇಬ್ಬರು ಮಕ್ಕಳು. ಅವರಿಬ್ಬರೂ ತಂದೆಯ ಮರಣದಿಂದ ಸಿಟ್ಟಾದರು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಆತನಿಂದ ಅನೇಕ ವರಗಳನ್ನು ಪಡೆದರು. ಅದರಿಂದ ಸೊಕ್ಕಿದ ಅವರು ಅನೇಕ ದೇವತೆಗಳಿಗೆ ಕಾಡತೊಡಗಿದರು. ಆಗ ವಿಷ್ಣುವಿನ ಉಪಾಯದಂತೆ ಕಾಳಿ ದೇವಿಯನ್ನು ಸೃಷ್ಟಿಸಿದರು. ಕಾಳಿದೇವಿ ರಕ್ತಾಕ್ಷನನ್ನು ಯುದ್ಧದಲ್ಲಿ ಕೊಂದಳು.

ಆಗ ತೀವ್ರ ಕುಪಿತನಾದ ಕೃಷ್ಣಾಕ್ಷ ದೇವತೆಗಳ ವಿರುದ್ಧ ಯುದ್ಧಕ್ಕೆ ಬಂದ. ಆಗ ದೇವತೆಗಳು ಈಶ್ವರನಿಗೆ ಮೊರೆ ಹೋದರು. ಆಗ ಲಯಕರ್ತನಾದ ಶಿವ ಭಯಂಕರವಾದ ರೂಪಧರಿಸಿ ಯುದ್ಧಕ್ಕೆ ಬಂದ. ಈ ರೂಪಕ್ಕೆ ದೇವತೆಗಳು ಭೈರವ ಎಂದು ಕರೆದರು. ಘೋರ ಯುದ್ಧದಲ್ಲಿ ಹೆದರಿದ ಕೃಷ್ಣಾಕ್ಷ ಸಹ್ಯ ಪರ್ವತಕ್ಕೆ ಹೋಗಿ ಅಡಗಿಕೊಂಡ. ಆಗ ಸಿಟ್ಟಾದ ಭೈರವೇಶ್ವರ ಪರ್ವತಕ್ಕೆ ಗಟ್ಟಿಯಾಗಿ ಒದ್ದಾಗ ಪರ್ವತದ ಜತೆಗೆ ರಕ್ಕಸನ ತಲೆಯೂ ಛಿದ್ರವಾಯಿತು.

ಈ ಸಂದರ್ಭದಲ್ಲಿ ಸಹ್ಯರಾಜ, ಕೋಪೋದ್ರಿಕ್ತನಾಗಿದ್ದ ಈಶ್ವರನನ್ನು ಶಾಂತವಾಗುವಂತೆ ಪ್ರಾರ್ಥಿಸಿ, ಜನ ರಕ್ಷಣೆಗಾಗಿ ಇಲ್ಲಿಯೇ ನೆಲೆಸುವಂತೆ ಕೋರಿಕೊಂಡ. ಆಗ ಪರಶಿವನು ತಾನು ಸುಪ್ರೀತನಾಗಿದ್ದು, ನಿನ್ನ ಕೋರಿಕೆಯಂತೆ ಇಲ್ಲಿಯೇ ಗುಪ್ತವಾಗಿ ಇರುತ್ತೇನೆ ಎಂದನು. ಶಿವನು ತನ್ನ ಗಣಗಳೊಂದಿಗೆ ಸಮಾಲೋಚಿಸಿ ಶಿಲಾ ರೂಪದಲ್ಲಿ ನೆಲೆಸಲು ಇಚ್ಛಿಸಿದ ಎಂದು ಹೇಳಲಾಗುತ್ತದೆ.

ಚಂಡಿಕಾ ತೀರ್ಥ, ಸೂರ್ಯ ತೀರ್ಥ, ಸಪ್ತ ಋಷಿ ತೀರ್ಥ, ಅಗ್ನಿ ತೀರ್ಥ, ಉಪಮನ್ಯು ತೀರ್ಥ ಹಾಗೂ ರುದ್ರ ತೀರ್ಥ ಹೀಗೆ ಶ್ರೀ ಕ್ಷೇತ್ರ ಯಾಣದಲ್ಲಿ ಆರು ತೀರ್ಥಗಳಿದ್ದು, ಋಷಿ ಮುನಿಗಳು, ಯೋಗಿಗಳು, ಸಾಧುಸಂತರು, ಅನುಷ್ಠಾನಿಕರು ಹೇಳುವಂತೆ ಜಪ, ತಪ ಅನುಷ್ಠಾನಗಳಿಂದ ಸಿದ್ಧಿ ಪಡೆಯುವಲ್ಲಿ ಮಾನವನ ಅರಿಷಡ್ವರ್ಗಗಳಾದ ಕಾಮವನ್ನು ಚಂಡಿಕಾ ತೀರ್ಥದಿಂದ, ಕ್ರೋಧವನ್ನು ಸೂರ್ಯತೀರ್ಥದಿಂದ, ಮೋಹವನ್ನು ಸಪ್ತಋಷಿ ತೀರ್ಥದಿಂದ, ಲೋಭವನ್ನು ಅಗ್ನಿ ತೀರ್ಥದಿಂದ, ಮದವನ್ನು ಉಪಮನ್ಯು ತೀರ್ಥದಿಂದ ಮತ್ತು ಮಾತ್ಸರ್ಯವನ್ನು ರುದ್ರ ತೀರ್ಥದಿಂದ ಆಯಾ ವರ್ಗ ಸಂಬಂಧಿಗಳಿಗನುಸಾರ ಸತತ ನಿಯಮಿತ ಸೇವನೆಯಿಂದ ಪರಿಣಾಮಕಾರಿಯಾಗಿ ಗೆಲ್ಲಲು ಸಾಧ್ಯ ಎನ್ನುವ ಅಭಿಪ್ರಾಯ ಇದೆ.

ಹೀಗೆಯೇ ಈ ಕ್ಷೇತ್ರ ಬ್ರಹ್ಮ ಹತ್ಯೆ, ಗೋ ಹತ್ಯೆ, ಶಿಶು ಹತ್ಯೆಗಳಂತಹ ಮಹಾಪಾಪಗಳನ್ನು ನಿವಾರಿಸುವ ಏಕೈಕ ಕ್ಷೇತ್ರವಾಗಿದೆ. ಜ್ಞಾನ ಸಾಧನೆಗೆ ಮಾರ್ಗವೂ ಆಗಿದೆ. ಶಿವರಾತ್ರಿಯಂದು ಭೈರವನ ಪೂಜೆ ಮಾಡಿ ಗೋಕರ್ಣದ ಮಹಾಬಲನ ಆತ್ಮಲಿಂಗ ಪೂಜಿಸುವ ವಿಧಿ ಇಂದಿಗೂ ಕಂಡುಬರುತ್ತದೆ.

ಈ ಭೈರವ ಕ್ಷೇತ್ರದಲ್ಲಿ ಪ್ರದಾನವಾಗಿ ಭೈರವೇಶ್ವರ ಮತ್ತು ಆತನ ಶಿಲಾ ಶಿಖರ, ಮೋಹಿನಿ ಶಿಖರ ಅತ್ಯಂತ ಎತ್ತರದ್ದಾಗಿದೆ. ಭೈರವನ ಶಿಖರದಲ್ಲಿರುವ ಶಿವನ ತಲೆಯ ಮೇಲೆ ನಿರಂತರ ಗಂಗೆ ಬೀಳುತ್ತಲೇ ಇದೆ. ಈತನ ಪರಿವಾರ ರೂಪದಲ್ಲಿ ಶ್ರೀ ಗಣಪತಿ, ಮೋಹಿನಿ, ಗೋಪಾಲ ಕೃಷ್ಣಮೂರ್ತಿ, ಕ್ಷೇತ್ರಪಾಲ ನಾಗ ಇತ್ಯಾದಿಗಳಿವೆ. ೫೬ ದೊಡ್ಡ ಶಿಲಾ ಶಿಬಿರಗಳಲ್ಲಿ ಐದು ಸಣ್ಣ ಶಿಖರಗಳೂ ಸೇರಿದಂತೆ, ಇಲ್ಲಿನ ೬೧ ಶಿಖರಗಳಲ್ಲಿ ದೇವತೆಗಳು ವಾಸವಾಗಿದ್ದಾರೆ.

ಭೈರವ ಎನ್ನುವ ಮಹಾಪುರಾಣವಿದೆ. ಈ ಪುಣ್ಯವು ವ್ಯಾಸನಿಂದ ದ್ರೋಣ ಪುತ್ರ ಅಶ್ವತ್ಥಾಮನಿಗೆ ಹೇಳಲ್ಪಟ್ಟಿದೆ. ಆ ದ್ರೋಣಪುತ್ರನು ಭೈರವ ಕ್ಷೇತ್ರಕ್ಕೆ ಹೋಗಿ ಶಿಶುಹತ್ಯಾ ದೋಷ ನಿವಾರಿಸಿಕೊಳ್ಳುತ್ತಾನೆ. ಆ ಕ್ಷೇತ್ರವೇ ಈ ಭೈರವೇಶ್ವರನ ಕ್ಷೇತ್ರ ಎನ್ನಲಾಗುತ್ತದೆ. ಈ ಕ್ಷೇತ್ರದಲ್ಲಿ ಶಿವನು ತ್ರಿಪುರಾಸುರನನ್ನು ನಾಶ ಮಾಡುವಾಗ ಭೂಮಿ ಸುಟ್ಟು ಹೋಗಿದ್ದರಿಂದ ಈ ಕ್ಷೇತ್ರದ ಮಣ್ಣು ಕಪ್ಪಾಗಿದೆ ಎನ್ನುತ್ತಾರೆ.

ಧಾರ್ಮಿಕವಾಗಿ ಒಂದು ಕಥೆಯಾದರೆ, ವೈಜ್ಞಾನಿಕವಾಗಿ, ಇಲ್ಲಿನ ಶಿಖರಗಳು ಸಾವಿರಾರು ವರ್ಷಗಳ ಹಿಂದೆ ದೂರದ ಭೂಮಿಯಲ್ಲಿ ಸೃಷ್ಟಿಗೊಂಡ ಲಾವಾರಸ ಸಿಡಿದು ಆ ಬಿಸಿ ನೀರಿನ ಬುಗ್ಗೆಗಳೇ ಶಿಖರವಾಗಿ ನಿಂತಿವೆ ಎಂದು ಹೇಳುತ್ತಾರೆ.

ಶ್ರೀ ಕ್ಷೇತ್ರ ಯಾಣ ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಇಲ್ಲಿನ ಶಿಲಾ ಶಿಖರಗಳು, ಅರಣ್ಯ ಸಂಪತ್ತು, ಇಹಲೋಕವನ್ನೇ ಮರೆಸುವ ತೀರ್ಥಗಳು. ಇದನ್ನು ದೃಢೀಕರಿಸುತ್ತವೆ. ಒಮ್ಮೆ ಇಲ್ಲಿನ ಶಿಲಾ ಶಿಖರ ಸಮೂಹ ನೋಡಿದರೆ, ಜೀವನದ ಕೊನೆಯ ಉಸಿರಿರುವವರೆಗೂ ಮರೆಯಲು ಸಾಧ್ಯವೇ ಇಲ್ಲ.

 

 

Leave a Comment