ಯಶ್ ಮನೆಯಲ್ಲಿ ಅಪಾರ ಆಸ್ತಿ ಪತ್ತೇ

ಬೆಂಗಳೂರು, ಜ. ೧೨- ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ನಟ ಯಶ್ ಮನೆಯಲ್ಲಿ ಕೋಟಿ ಕೋಟಿ ರೂ. ಮೊತ್ತದ ಮನೆ, ನಿವೇಶನ, ಐಷಾರಾಮಿ ಕಾರುಗಳು ಹಾಗೂ ಅಪಾರ ಪ್ರಮಾಣದ ಆಸ್ತಿ – ಪಾಸ್ತಿ ಹಾಗೂ ಆಭರಣ ಪತ್ತೆಯಾಗಿದೆ.
ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿ 20 ಕೋಟಿ ರೂ. ಮೌಲ್ಯದ ಪೆಂಟ್ ಹೌಸ್, ಮೈಸೂರಿನ ಬೋಗಾದಿಯಲ್ಲಿ ವಿಲಾಸಿ ಪೆಂಟ್ ಹೌಸ್, ಬನ್ನೇರುಘಟ್ಟ ಸಮೀಪ 3 ಸೈಟ್, ಜೆಪಿ ನಗರದಲ್ಲಿ 1 ಸೈಟ್, ಹೊಸಕೆರೆಹಳ್ಳಿಯಲ್ಲಿ ಒಂದು ಮನೆ, ಕತ್ರಿಗುಪ್ಪೆಯಲ್ಲಿ ತಂಗಿಗಾಗಿ ಒಂದು ಮನೆ ಖರೀದಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ 78 ಎಕರೆ ಜಮೀನು ಖರೀದಿಗೆ ಮುಂದಾಗಿದ್ದು, ಅದಕ್ಕೆ ಮುಂಗಡ ಹಣವನ್ನೂ ನೀಡಲಾಗಿದ್ದು, ಮೈಸೂರಿನಲ್ಲಿ ಜಾಗ ಖರೀದಿ ಮಾಡಿ ರೈತನಾಗುವ ಕನಸನ್ನು ಯಶ್ ಕಂಡಿದ್ದರು. ಈ ಕಾರಣಕ್ಕಾಗಿ ಜಮೀನನ್ನು ಖರೀದಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಹಾಸನದಲ್ಲೂ ಯಶ್ ಮನೆ ಹೊಂದಿದ್ದು, ಕೋಲಾರದಲ್ಲಿ 10 ನಿವೇಶನ ತಾಯಿಯ ಹೆಸರಿನಲ್ಲಿದೆ ಎನ್ನಲಾಗಿದೆ. ಇದಲ್ಲದೆ, ಪತ್ನಿ ರಾಧಿಕಾ ಪಂಡಿತ್ ಹೆಸರಿನಲ್ಲಿ ಹಲವು ನಿವೇಶನಗಳನ್ನು ಹೊಂದಿದ್ದು, ಮೈಸೂರು – ಬೆಂಗಳೂರು ರಸ್ತೆಯಲ್ಲಿ ಒಂದು ನಿವೇಶನ, ಬಿಡದಿಯಲ್ಲಿ ಮತ್ತೊಂದು ನಿವೇಶನ ಹೊಂದಲಾಗಿದೆ. ಇದಲ್ಲದೆ, ಮೂರು ಬೆಂಜ್ ಕಾರು, ಒಂದು ಆಡಿ, ಒಂದು ಪೆಜೆರೋ, ಒಂದು ಫಾರ್ಚುನರ್ ಸೇರಿದಂತೆ, ಹಲವು ಐಷಾರಾಮಿ ಕಾರುಗಳಿವೆ.
ಇವುಗಳ ಜೊತೆಗೆ ವಿವಿಧ ಬ್ಯಾಂಕ್‌ಗಳಲ್ಲಿ 15 ರಿಂದ 16 ಕೋಟಿ ರೂ. ಸಾಲ ಹೊಂದಿದ್ದು, ಯಶೋಮಾರ್ಗ ಸಂಸ್ಥೆಯ ಮೂಲಕ 5 ಕೋಟಿ ರೂ. ಗೂ ಹೆಚ್ಚು ದಾನಧರ್ಮ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವಿಚಾರಣೆ ಸಂದರ್ಭದಲ್ಲಿ ಯಶ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave a Comment