ಯಶ್ ಕೊಲೆಗೆ ಸಂಚು ರೌಡಿ ಕೋದಂಡನಿಗಾಗಿ ಶೋಧ

ಬೆಂಗಳೂರು,ಜು.೧೨-ಗುಂಡಿನ ದಾಳಿ ನಡೆಸಿ ಬಂಧಿಸಿರುವ ಕುಖ್ಯಾತ ರೌಡಿ ಸೈಕಲ್ ರವಿ ವಿಚಾರಣೆ ವೇಳೆ ಕನ್ನಡದ ಖ್ಯಾತ ನಟ ಯಶ್ ಕೊಲೆಗೆ ಸಂಚು ರೂಪಿಸಿದ್ದ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಕೇಂದ್ರ ಅಪರಾಧ(ಸಿಸಿಬಿ)ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಎರಡೂವರೆ  ವರ್ಷಗಳ ಹಿಂದೆ ಯಶ್ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಯಶ್ ಮತ್ತು ನಿರ್ಮಾಪಕ ಜಯಣ್ಣ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ಮೌಖಿಕ ದೂರು ಸಲ್ಲಿಸಿದ್ದರು.ಇದಾದ ನಂತರ ಎಚ್ಚೆತ್ತುಕೊಂಡಿದ್ದ ಸಿಸಿಬಿ ಪೊಲೀಸರು ಹಲವು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದರು.

ಆಗಲೂ ಸೈಕಲ್ ರವಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಇದರೊಂದಿಗೆ ಮತ್ತೋರ್ವ ರೌಡಿಶೀಟರ್ ತ್ಯಾಗರಾಜನಗರ ಕೋದಂಡರಾಮ ಕೂಡಾ ಪೊಲೀಸರಿಗೆ ಸಿಕ್ಕಿರಲಿಲ್ಲ. ಇದುವರೆಗೂ ಕೊದಂಡರಾಮ ಎಲ್ಲಿದ್ದಾನೆ ಎನ್ನುವ ಮಾಹಿತಿ ಕೂಡಾ ಯಾರಿಗೂ ಸಿಕ್ಕಿಲ್ಲ.ನಟ ಯಶ್ ಹತ್ಯೆಗೆ ಸ್ಕೆಚ್ ರೂಪಿಸಲಾಗಿತ್ತು ಎಂಬ ವಿಚಾರವಾಗಿ ಇದೀಗ ಸಿಸಿಬಿ ಅಧಿಕಾರಿಗಳು ಸೈಕಲ್ ರವಿಯನ್ನು ವಿಚಾರಣೆಗೊಳಪಡಿಸಿದ್ದು, ಆತ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ಯಶ್ ವಿಚಾರ ಪ್ರಸ್ತಾಪವಾಗಿತ್ತು. ಈ ವೇಳೆ  ಚರ್ಚೆಗಳು ನಡೆದಿತ್ತು ಎಂದು ಸೈಕಲ್ ರವಿ ಸಿಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಆದರೆ ಕೊಲೆಗೆ ಸಂಚು ರೂಪಿಸುವ ಮತ್ತು ಯತ್ನ ನಡೆಸುವಷ್ಟರ ಮಟ್ಟಕ್ಕೆ ಈ ಬೆಳವಣಿಗೆ ಹೋಗಿರಲಿಲ್ಲ ಎಂದೂ ಕೂಡಾ ಸೈಕಲ್ ರವಿ ಹೇಳಿದ್ದಾನೆ.

ನಟ ಯಶ್ ವಿಚಾರದಲ್ಲಿ ಸೈಕಲ್ ರವಿಗಿಂತಲೂ ಮತ್ತೋರ್ವ ರೌಡಿ ಶೀಟರ್ ಕೋದಂಡರಾಮ ಹೆಚ್ಚು ಆಸಕ್ತಿ ವಹಿಸಿದ್ದ ಎನ್ನಲಾಗಿದೆ. ಆಶ್ಚರ್ಯ ಎಂದರೆ  ಪರಸ್ಪರ ವಿರೋಧಿಗಳಾಗಿದ್ದ ಸೈಕಲ್ ರವಿ ಮತ್ತು ಕೋದಂಡರಾಮ ಯಶ್ ವಿಚಾರ ಚರ್ಚೆಗೆ ಬಂದ ನಂತರ ತಮ್ಮ ವೈರತ್ವ ಮರೆತು ಒಂದಾಗಿದ್ದರು.

ಯಶ್ ಕೊಲೆಗೆ ಸ್ಕೆಚ್ ವಿಚಾರದ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿವೋರ್ವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, “ಅದೆಲ್ಲ ಹಳೆಯ ಕಥೆ, ಅಷ್ಟೊಂದು ಗಂಭೀರವಾಗಿ ಆ ಬಗ್ಗೆ ಬೆಳವಣಿಗೆಗಳು ನಡೆದಿರಲಿಲ್ಲ. ಸೈಕಲ್ ರವಿ ಆಗ ನಮಗೆ ಸಿಕ್ಕಿರಲಿಲ್ಲವಾದ್ದರಿಂದ ಈಗ ಆತನಿಂದ ಮಾಹಿತಿ ಪಡೆಯಲಾಗಿದೆ. ಆದರೆ ಹತ್ಯೆಗೆ ಸಂಚು ರೂಪಿಸಿದ್ದಾಗಲೀ, ಪ್ರಯತ್ನಗಳಾಗಲಿ ನಡೆದಿರಲಿಲ್ಲ. ಪಾರ್ಟಿಯೊಂದರಲ್ಲಿ ಕುಡಿದು ಮಾತಾಡಿಕೊಂಡಿದ್ದರಷ್ಟೇ” ಎಂದು ತಿಳಿಸಿದ್ದಾರೆ.

ಇನ್ನು ಸೈಕಲ್ ರವಿಗೆ ಸ್ಯಾಂಡಲ್‌ವುಡ್ ಸಂಪರ್ಕ ಕೂಡಾ ಇದ್ದು. ಸುಮಾರು ೨೦ ಕ್ಕೂ ಹೆಚ್ಚು ನಕಲಿ ಸಿಮ್‌ಗಳನ್ನು ಬಳಸಿ ಕೆಲವು ನಿರ್ಮಾಪಕ , ನಿರ್ದೇಶಕರೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದ ಎನ್ನಲಾಗಿದೆ. ಫೋನ್ ಕರೆ ಮಾಹಿತಿ ಪರಿಶೀಲನೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

Leave a Comment