ಯಶೋಧರಮ್ಮದಾಸಪ್ಪ 115ನೇ ಜನ್ಮಜಯಂತಿ ಆಚರಣೆ

ಅರಸೀಕೆರೆ, ಮೇ ೩೦- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅನುಯಾಯಿ ಮಾಜಿ ಸಚಿವೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಅವರ 115ನೇ ಜನ್ಮ ದಿನವನ್ನು ನಗರದ ಹೊರವಲಯದ ಕಸ್ತೂರಿಬಾ ಶಿಬಿರದ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತಾಬಸ್ಮ ಇರುವ ಸಮಾಧಿಗೆ ಹಾಗೂ ಮತ್ತೊಂದೆಡೆ ಯಶೋಧರಮ್ಮ ದಾಸಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆಯನ್ನು ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ಪುಷ್ಪಾರ್ಚನೆ ಮಾಡುವುದರೊಂದಿಗೆ ಗೌರವ ಸಮರ್ಪಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ಮಾತನಾಡಿ, ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ. ನಾಡು-ನುಡಿ ದೇಶಕ್ಕಾಗಿ ದುಡಿದ  ಮಹನೀಯರನ್ನು ನೆನೆಯುವುದು ಹಾಗೂ ಅವರು ತೋರಿದ ಮಾರ್ಗದಲ್ಲಿ ನಾವು ಸಾಗುವುದರಿಂದ ಮಾತ್ರ ನಿಜವಾದ ಗೌರವನ್ನು ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಯಶೋಧರಮ್ಮ ದಾಸಪ್ಪ ಅವರು ಮಹಾತ್ಮ ಗಾಂಧೀಜಿಯವರ ಪರಮ ಆಪ್ತರಾಗಿದ್ದವರು. ಕರ್ನಾಟಕದ ಕಸ್ತೂರಿಬಾ ಪಾನ ನಿರೋಧಕ್ಕಾಗಿ ಸಚಿವ ಸ್ಥಾನ ತ್ಯಜಿಸಿದ ಆದರ್ಶ ಮಹಿಳೆ ಎಂದು ಸ್ವತಃ ಗಾಂಧೀಜಿಯವರಿಂದ ಕರೆಸಿಕೊಂಡ ದಿಟ್ಟ ಮಹಿಳೆ ಯಶೋಧರಮ್ಮ ದಾಸಪ್ಪ ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವ್ಯವಸ್ಥಾಪಕ ಚಂದ್ರಶೇಖರ ಆದಿಚುಂಚನಗಿರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ  ಜ್ಞಾನೇಶ್ವರಿ ಕಸ್ತೂರಿಬಾ ಶಿಬಿರದ ಪ್ರತಿನಿಧಿ ಮೇರಿ ಆದಿಚುಂಚನಗಿರಿ ಕಾಲೇಜಿನ ದೈಹಿಕ ಶಿಕ್ಷಕ ನಾಗೇಶ್, ಹಾಸನ ಆದಿಚುಂಚನಗಿರಿ ಮಠದ ರತನ್ ಹಾಗೂ ಸ್ಥಳೀಯ ಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Share

Leave a Comment