ಯಶಸ್ವಿ ಶಸ್ತ್ರಚಿಕಿತ್ಸೆ: ಮಹಿಳೆ ಹೊಟ್ಟೆಯಿಂದ 4 ಕೆ.ಜಿ. ಗಡ್ಡೆ ಹೊರಕ್ಕೆ

ತುಮಕೂರು, ಏ. ೨೧- ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಡಾ. ದುರ್ಗಾದಾಸ್ ನೇತೃತ್ವದ ವೈದ್ಯರ ತಂಡ ಮಹಿಳೆಯೊಬ್ಬರ ಗರ್ಭಕೋಶದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ ಸುಮಾರು 4 ಕೆ.ಜಿ. 730 ಗ್ರಾಂ ತೂಕದ ಗಡ್ಡೆಯಲ್ಲಿ ಹೊರ ತೆಗೆದಿದ್ದಾರೆ.

ನಗರದ ಸಿರಾಗೇಟ್ ವಾಸಿ ರಾಮಕೃಷ್ಣಯ್ಯ ಎಂಬುವರ ಪತ್ನಿ ಜಯಮ್ಮ (51) ಎಂಬುವರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಪರೀಕ್ಷೆಗಾಗಿ ನಗರದ ಎಸ್.ಎಸ್.ಪುರಂನಲ್ಲಿರುವ ಕಸ್ತೂರ್ಬಾ ಆಸ್ಪತ್ರೆಗೆ ತೆರಳಿದ್ದಾರೆ. ಈಕೆಯ ಪರೀಕ್ಷಿಸಿದ ಡಾ. ದುರ್ಗಾದಾಸ್ ಆಸ್ರಣ್ಣ ಅವರು ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿದಾಗ ಗರ್ಭಾಶಯದಲ್ಲಿ ಗಡ್ಡೆ ಬೆಳೆದಿರುವುದು ದೃಢಪಟ್ಟಿದೆ.

ಇದನ್ನು ಗಮನಿಸಿದ ತಜ್ಞ ವೈದ್ಯ ಡಾ. ದುರ್ಗಾದಾಸ್ ಆಸ್ರಣ್ಣ ಅವರು ಮಹಿಳೆಯ ಆರೋಗ್ಯ ದೃಷ್ಠಿಯಿಂದ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರ ತೆಗೆಯಲೇಬೇಕು ಎಂದು ಮಹಿಳೆ ಮತ್ತು ಆಕೆಯ ಕುಟುಂಬದವರಿಗೆ ತಿಳಿಸಿದರು.

ವೈದ್ಯರ ಸಲಹೆ ಮೇರೆಗೆ ಮಹಿಳೆ ಕುಟುಂಬದವರು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ದುರ್ಗಾದಾಸ್ ಆಸ್ರಣ್ಣ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞ ಡಾ. ಸುರೇಶ್ ಮತ್ತು ತಂಡದವರು ಸುಮಾರು 1 ಗಂಟೆ 40 ನಿಮಿಷಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. 730 ಗ್ರಾಂ ತೂಕದ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶದ ತೂಕವು 60 ರಿಂದ 80 ಗ್ರಾಂ ತೂಕವಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಿಳೆ ಜಯಮ್ಮ ಅವರು ಈಗ ಆರೋಗ್ಯದಿಂದಿದ್ದಾರೆ ಎಂದು ಡಾ. ದುರ್ಗಾದಾಸ್ ಆಸ್ರಣ್ಣ ತಿಳಿಸಿದ್ದಾರೆ.

Leave a Comment