ಯಲ್ಲಾಪುರ ಕ್ಷೇತ್ರಕ್ಕೆ ಅ.21ರಂದು ಚುನಾವಣೆ; ನೀತಿ ಸಂಹಿತೆ ಜಾರಿ-ಜಿಲ್ಲಾಧಿಕಾರಿ

ಕಾರವಾರ, ಸೆ 22-  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ತೆರವಾಗಿರುವ ಶಾಸಕ ಸ್ಥಾನಕ್ಕೆ ಅಕ್ಟೋಬರ್ 21ರಂದು ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗ ದಿನಾಂಕ ನಿಗದಿಗೊಳಿಸಿದ್ದು, ಶನಿವಾರದಿಂದಲೇ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ಈ ಕುರಿತು ವಿವರ ನೀಡಿದ ಜಿಲ್ಲಾ ಚುನಾವಣಾಧಿಕಾರಿ  ಡಾ.ಹರೀಶ್‍ಕುಮಾರ್ ಅವರು, ದಿನಾಂಕ 21-10-2019ರಂದು 81-ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಿಗದಿಗೊಳಿಸಲಾಗಿದ್ದು, ದಿನಾಂಕ 23-09-2019ರಂದು ಅಧಿಸೂಚನೆ ಹೊರಡಿಸಲಾಗುವುದು. ದಿನಾಂಕ 30-09-2019ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ದಿನಾಂಕ 01-10-2019ರಂದು ನಾಮಪತ್ರ ಪರಿಶೀಲನೆ, ದಿನಾಂಕ 03-10-2019 ನಾಮಪತ್ರ ವಾಪಸು ಪಡೆಯಲು ಕೊನೆಯ ದಿನ ಹಾಗು ದಿನಾಂಕ 21-10-2019 ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ದಿನಾಂಕ 24-10-2019ರಂದು ಮತಎಣಿಕೆ ನಡೆಯಲಿದೆ. ದಿನಾಂಕ 27-10-2019ರವರೆಗೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಯಲ್ಲಾಪುರ, ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರಲಿದ್ದು, ಕ್ಷೇತ್ರದಿಂದ 231 ಮತಗಟ್ಟೆಗಳು ಇರಲಿವೆ ಹಾಗೂ ಪುರಷರು 87942, ಮಹಿಳೆಯರು 84687 ಹಾಗೂ ಇತರೆ 1 ಮತದಾರರು ಸೇರಿ ಒಟ್ಟು 1,72,630 ಮತದಾರರು ಕ್ಷೇತ್ರದಲ್ಲಿದ್ದಾರೆ ಎಂದರು.
ಭಾವಚಿತ್ರ ಸಹಿತ ಮತದಾರರ ಪಟ್ಟಿಯಲ್ಲಿ ಈ ಚುನಾವಣೆಯಲ್ಲಿ ಬಳಸಲಾಗುತ್ತಿದ್ದು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಶೇ.100 ಮತದಾರರ ಚೀಟಿ ನೀಡಲಾಗಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಪರ್ಯಾಯ ದಾಖಲೆಗಳನ್ನು ಮತದಾನದ ಸಂದರ್ಭದಲ್ಲಿ ಮತದಾರರಿಗೆ ಅವಕಾಶಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆಯಲ್ಲಿ ಮೂಲಸೌಲಭ್ಯ ಕಲ್ಪಿಸಲಾಗುವುದು ಹಾಗೂ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು ಎಂದು ಅವರು ತಿಳಿಸಿದರು.
ಈ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಎಲ್ಲ ರಾಜಕೀಯ ಪಕ್ಷಗಳಿಗೆ, ರಾಜಕಾರಣಗಳಿಗೆ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಮಾತನಾಡಿ, ಮಾದರಿ ನೀತಿ ಸಂಹಿತೆ ಪಾಲನೆ ಸಂಬಂಧ ಆಯೋಗದ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆ ಕ್ರಮ ವಹಿಸಲಿದೆ. ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಲಾಗಿದೆ ಎಂದರು.

Leave a Comment