ಯಥಾಸ್ಥಿತಿ ಕಾಪಾಡಲು ಸುಪ್ರೀಂ ಸೂಚನೆ

ನವದೆಹಲಿ, ಜು. ೧೨- ಶಾಸಕರ ರಾಜೀನಾಮೆ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಸಮ್ಮಿಶ್ರ ಸರ್ಕಾರ ತುಸು ನಿಟ್ಟುಸಿರು ಬಿಡುವಂತಾಗಿದೆ. ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ ಎಂಬಂತೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ.

* ಶಾಸಕರ ರಾಜೀನಾಮೆ ಪ್ರಕರಣ.
* ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಆದೇಶ.
* ನೆಮ್ಮದಿಯ ನಿಟ್ಟುಸಿರುಬಿಟ್ಟ ಮೈತ್ರಿ ಸರ್ಕಾರ.
* ಅನರ್ಹತೆ ಭೀತಿಯಿಂದ ಶಾಸಕರು ಸದ್ಯಕ್ಕೆ ಪಾರು.
* ಮಂಗಳವಾರಕ್ಕೆ ಮುಂದಿನ ವಿಚಾರಣೆ ನಿಗದಿ.
* ಅಂದು ಸ್ಪೀಕರ್ ಕ್ರಮದ ಬಗ್ಗೆ ತೀರ್ಪು.

ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ಅಥವಾ ಅನರ್ಹಗೊಳಿಸದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ಸಮ್ಮಿಶ್ರ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಮತ್ತೊಂದೆಡೆ ಅತೃಪ್ತ ಶಾಸಕರು ಸದ್ಯದ ಮಟ್ಟಿಗೆ ಅನರ್ಹತೆಯ ತೂಗುಗತ್ತಿಯಿಂದ ಪಾರಾಗುವಂತಾಗಿದೆ.
ಕಾಂಗ್ರೆಸ್-ಜೆಡಿಎಸ್‌ನ 10 ಅತೃಪ್ತ ಶಾಸಕರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಲ್ಲಿ ವಿಳಂಬ ಧೋರಣೆ ತಾಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ನಿನ್ನೆ ವಿಚಾರಣೆ ಕೈಗೆತ್ತಿಕೊಂಡು ಇಂದಿಗೆ ಮುಂದೂಡಲಾಗಿತ್ತು. ಇಂದು ಬೆಳಿಗ್ಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುತ್ತಿದ್ದಂತೆ ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ ರಾಜೀವ್ ಧವನ್ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಶಾಸಕರನ್ನು ಅನರ್ಹಗೊಳಿಸಬೇಕೋ ಅಥವಾ ಅವರ ರಾಜೀನಾಮೆಯನ್ನು ಅಂಗೀಕರಿಸಬೇಕೋ ಎನ್ನುವ ಸ್ಪೀಕರ್ ನಿರ್ಧಾರದ ಕುರಿತು ಮಂಗಳವಾರ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಂದು ತೀರ್ಪು ನೀಡಲಾಗುವುದು. ಅಲ್ಲಿಯವರೆಗೂ ಯಥಾಸ್ತಿತಿ ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಅತೃಪ್ತ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಶಾಸಕರ ರಾಜೀನಾಮೆಯನ್ನು ಸ್ಪೀಕರ್ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಮುಂಚೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಬ್ಬರ ರಾಜೀನಾಮೆ ಬಗ್ಗೆ ಯಾವುದೇ ನಿರ್ಧಾರಬೇಕಾದರೆ ಕೈಗೊಳ್ಳಲಿ. ಹೊಸದಾಗಿ ರಾಜೀನಾಮೆ ನೀಡುವ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಮಾಡಲಾಗುತ್ತಿದೆ. ಉದ್ದೇಶಕಪೂರ್ವಕವಾಗಿಯೇ ವಿಪ್ ಜಾರಿ ಮಾಡಲಾಗಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ, ಶಾಸಕರು ರಾಜೀನಾಮೆ ನೀಡಿದ ಘಟನೆಗಳ ಕುರಿತು ಚಿತ್ರೀಕರಣ ಮಾಡಲಾಗಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಲ್ಲಿಸಲಾಗಿದೆ. ಸ್ಪೀಕರ್ ರಾಜೀನಾಮೆ ವಿಷಯದಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸುತ್ತಿಲ್ಲ. ಅತೃಪ್ತ ಶಾಸಕರು ರಾಜಕೀಯ ಪ್ರೇರಿತವಾಗಿ ದೂರು ನೀಡಿದ್ದಾರೆ ಎಂದು ಸ್ಪೀಕರ್ ಕ್ರಮವನ್ನು ಸಮರ್ಥಿಸಿಕೊಂಡರು.
ಈ ವೇಳೆ ಮಧ್ಯೆ ಪ್ರವೇಶಿದ ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್, ಹರಿಯಾಣದಲ್ಲಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು 4 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಕಾಲಮಿತಿಯೊಳಗೇ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ಯಾವುದೇ ಆದೇಶ ನೀಡಬೇಡಿ. ಅವರಿಗೂ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.
ವಾದ-ವಿವಾದವನ್ನು ಆಲಿಸಿದ ಮುಖ್ಯಮಂತ್ರಿ ರಂಜನ್ ಗೊಗೊಯ್ ನೇತೃತ್ವದ ಪೀಠ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿದೆ.

ಉದ್ದೇಶಪೂರ್ವಕ ವಿಪ್ ಜಾರಿ
ಶಾಸಕರ ರಾಜೀನಾಮೆ ಅಂಗೀಕರಿಸುವಲ್ಲಿ ವಿಳಂಬ ಧೋರಣೆಯನ್ನು ಸ್ಪೀಕರ್ ಅನುಸರಿಸಿದ್ದಾರಲ್ಲದೆ ಶಾಸಕರಿಗೆ ಉದ್ದೇಶಪೂರ್ವಕವಾಗಿ ವಿಪ್ ಜಾರಿ ಮಾಡಲಾಗಿದೆ. ಇದು ಸರಿಯಲ್ಲ.
– ಮುಕುಲ್ ರೋಹ್ಟಗಿ
ಅತೃಪ್ತ ಶಾಸಕರ ಪರ ವಕೀಲ

ವಿಳಂಬ ಇಲ್ಲ
ಶಾಸಕರ ರಾಜೀನಾಮೆ ವಿಷಯದಲ್ಲಿ ಸ್ಪೀಕರ್ ನಿಧಾನಗತಿಯ ಅಥವಾ ವಿಳಂಬ ಧೋರಣೆ ಅನುಸರಿಸಿಲ್ಲ. ಶಾಸಕರು ರಾಜೀನಾಮೆ ನೀಡಿರುವ ನಿನ್ನೆಯ ಘಟನೆ ಕುರಿತು ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ಅತೃಪ್ತರು ರಾಜಕೀಯ ಪ್ರೇರಿತ ದೂರು ನೀಡಿದ್ದಾರೆ.
– ಅಭಿಷೇಕ್ ಮನುಸಿಂಘ್ವಿ
ಸ್ಪೀಕರ್ ಪರ ವಕೀಲ

ಕಾಲಾವಕಾಶ ಬೇಕು
ಹರಿಯಾಣದಲ್ಲಿ ಶಾಸಕರ ರಾಜೀನಾಮೆ ಅಂಗೀಕರಿಸಲು 4 ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿ ಸ್ಪೀಕರ್ ಈ ಸಂಬಂಧ ನಿರ್ಧಾರ ಕೈಗೊಳ್ಳಲು ಸೂಕ್ತ ಕಾಲಾವಕಾಶದ ಅಗತ್ಯವಿದೆ. ಕಾಲ ಮಿತಿಯೊಳಗೆ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ತೀರ್ಪು ನೀಡಬೇಡಿ
-ರಾಜೀವ್ ಧವನ್
ಮುಖ್ಯಮಂತ್ರಿ ಪರ ವಕೀಲ

 

Leave a Comment