ಯಡಿಯೂರಪ್ಪ ಮುಖ್ಯಮಂತ್ರಿಯಾಗದಂತೆ ಹುಚ್ಚರಾಯಸ್ವಾಮಿ ದೇವರಲ್ಲಿ ಹರಕೆ: ಬೇಳೂರು

ಶಿವಮೊಗ್ಗ, ಜು 5 – ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ಮನೆದೇವರು ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವರಲ್ಲಿ ಹರಕೆ ಹೊತ್ತಿದ್ದೇನೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ರಾಜೀನಾಮೆ ಪರ್ವ ಶುರುವಾಗಿದ್ದು, ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲೇಬಾರದು.  ಅವರು ಮತ್ತೆ ಮುಖ್ಯಮಂತ್ರಿಯಾದರೆ  ತಾವು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಅವರು ಘೋಷಿಸಿದರು.

ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ  ಅವರ ಸಂಪರ್ಕದಲ್ಲಿ ಅನೇಕ ಬಿಜೆಪಿ ಶಾಸಕರು ಇದ್ದು,  ಅವರು ಮನಸು ಮಾಡಿದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಮಾಡಬಹುದು ಎಂದರು.

ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದ ಬೇಳೂರು, ಗೋಹತ್ಯೆ ನಿಷೇಧ ಕಾಯಿದೆ ವಿಚಾರದಲ್ಲಿ ಆ ಯಮ್ಮಾ ಬಾಯಿಗೆ ಬಂದಂತೆ ಮಾತನಾಡುತ್ತದೆ. ಬಾಯಿ ಬಡಿದುಕೊಳ್ಳುತ್ತಲೇ ಇರುತ್ತದೆ ಎಂದು ಏಕವಚನ ಪ್ರಯೋಗಿಸಿ, ಯಾವಾಗಲೂ ವಟವಟ ಎಂದು ಬಡಿದುಕೊಳ್ಳುವ ಆ ಯಮ್ಮಾ ಈಗ ಎಲ್ಲಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ಯಾವುದೇ ಕಾರಣಕ್ಕೂ ಶರಾವತಿ ಯೋಜನೆ ಜಾರಿಗೊಳಿಸಬಾರದು. ಶರಾವತಿ ಉಳಿಸಿ ಹೋರಾಟಕ್ಕೆ ತಮ್ಮ ಬೆಂಬಲವಿದ್ದು, ಜು.10 ರ ಜಿಲ್ಲಾ ಬಂದ್ ಗೆ ಕೈ ಜೋಡಿಸುವುದಾಗಿ ತಿಳಿಸಿದರು.

ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ವಿರೋಧಿಸುವ ನೆಪದಲ್ಲಿ ಬಿಜೆಪಿ ನಾಯಕರು ಇದರ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ. ಮುರುಘಾಮಠ ಸೇರಿದಂತೆ ಜಿಲ್ಲೆಯ ಹಲವು ಮಠಾಧೀಶರು ಕಲ್ಲೊಡ್ಡು ಯೋಜನೆಗೆ ವಿರೋಧ ವ್ಯಕ್ತಪಡಿಸಬೇಕು. ಈಗಾಗಲೇ ಮುಳುಗಡೆಯಾಗಿರುವ ಜನರನ್ನು ಮತ್ತೊಮ್ಮೆ ಮುಳುಗಿಸುವುದು ಬೇಡ. ಯಡಿಯೂರಪ್ಪ ಕಲ್ಲೊಡ್ಡು ಯೋಜನೆಗೆ ಕೈ ಹಾಕಿದರೆ ರಕ್ತಪಾತವಾಗಲಿದೆ ಎಂದು ಎಚ್ಚರಿಸಿದರು.

Leave a Comment