ಯಡಿಯೂರಪ್ಪನವರೇ ಸಿ.ಎಂ ಅಭ್ಯರ್ಥಿ-ಮುರಳಿಧರರಾವ್

ಹುಬ್ಬಳ್ಳಿ,ಸೆ 13- ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲೇ ಎದುರಿಸಲಾಗುವದು ಎಂದು ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಮುರಳಿಧರರಾವ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಸ್ಪಷ್ಟ ಪಡಿಸಿದರು.
ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾದರೂ ಅದನ್ನು ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ ಎಂದ ಅವರು ಕಾಂಗ್ರೆಸ್ ಮುಕ್ತ ರಾಜ್ಯಕ್ಕಾಗಿ 150 ಸ್ಥಾನಗಳನ್ನು ಗೆಲ್ಲುವುದೇ  ಪಕ್ಷದ ಗುರಿಯಾಗಿದೆ ಎಂದು ಖಡಾಖಂಡಿತವಾಗಿ ನುಡಿದರು.
ಕಾಂಗ್ರೆಸ್ ನ ವಂಶಾಡಳಿತ ವ್ಯವಸ್ಥೆಯನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿರುವುದು ದುರದೃಷ್ಟಕರ ಎಂದ ಅವರು ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಇಲ್ಲ ಎಂದು ಹೇಳಿದರು.
ಇದೇ ಕಾಂಗ್ರೆಸ್ ಪಕ್ಷ ರಾಹುಲ್ ಜೇಬಿನಲ್ಲಿದ್ದು ಬಿಜೆಪಿಯ ನೈತಿಕತೆ ಕುರಿತು ಮಾತನಾಡುವ ಹಕ್ಕು ರಾಹುಲ್ ಗಿಲ್ಲ ಎಂದವರು ಖಾರವಾಗಿ ನುಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದರೂ ಕಾಂಗ್ರೆಸ್ ಸರ್ಕಾರ ನಾಚಿಕೆಗೇಡಿನ ವರ್ತನೆ ತೋರುತ್ತಿರುವುದು ಎಲ್ಲರಿಗೂ ಗೊತ್ತಿದೆ, ಜನತೆಯೇ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಮಹಾದಾಯಿ ಯೋಜನೆ ಅನುಷ್ಠಾನ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪತ್ರಕರ್ತೆ ಗೌರಿ ಲಂಕೇಶ್ ರ ಹತ್ಯೆಯ ವಿಷಯದಲ್ಲಿಯೂ ಅದನ್ನೇ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಮಹಾದಾಯಿ ವಿಷಯದಲ್ಲಿ ಬಿಜೆಪಿ ರೈತರ ಪರವಾಗಿದೆ, ನಾವುಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ ಅವರನ್ನು ಈ ವಿಷಯದ ಕುರಿತು ಮನವೊಲಿಸತ್ತೇವೆ ಅದೇ ರೀತಿ ಸಿದ್ಧರಾಮಯ್ಯನವರು ಅಲ್ಲಿನ ಕಾಂಗ್ರೆಸ್ ನವರನ್ನು ಒಪ್ಪಿಸಲು ಮುಂದಾಗಲಿ ಎಂದು ಮುರಳೀಧರರಾವ್ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಅದು ನಿಶ್ಚಿತ ಎಂದವರು ನುಡಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ಡಿ.ಕೆ.ಚವ್ಹಾಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment