ಯಕ್ಷಗಾನಕ್ಕೆ ಬೆದರಿಕೆ

ಮುಸ್ಲಿಂ ಅವಹೇಳನದ ವಿರುದ್ಧ ಆಕ್ರೋಶ

ಮಂಗಳೂರು, ಜ.೧೨- ಯಕ್ಷಗಾನದ ಪ್ರಸಂಗವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ಯಕ್ಷಗಾನದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ಮುಸ್ಲಿಂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿವೆ. ಈ ಪ್ರಸಂಗವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರಸಂಗದಲ್ಲಿ ಅಭಿನಯಿಸಿದ ಕಲಾವಿದರು ದಾರಿಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಬೆದರಿಕೆ ಒಡ್ಡಲಾಗಿದೆ.

ಉಡುಪಿಯ ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಪ್ರಸಂಗ ಇದಾಗಿದ್ದು ಎಲ್ಲಿ-ಯಾವಾಗ ಪ್ರದರ್ಶಿಸಲಾಯಿತು ಎಂಬುದರ ಉಲ್ಲೇಖವಿಲ್ಲ. ‘ಯಕ್ಷಗಾನದಲ್ಲಿ ಕೂಡ ಮುಸ್ಲಿಂ ಸಮುದಾಯದ ಬಗ್ಗೆ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ, ಮುಸ್ಲಿಮರಿಗೆ ಹುಟ್ಟುವ ಮಕ್ಕಳ ಬಗ್ಗೆ ಅವಮಾನಿಸಲಾಗಿದೆ. ಮುಸ್ಲಿಮರಿಗೆ ಹುಟ್ಟುವ ಇಷ್ಟೊಂದು ಮಕ್ಕಳು ನಿಮಗೆ ಹುಟ್ಟಿದ್ದು ಎಂಬ ಗ್ಯಾರಂಟಿ ಇದೆಯೇ ಎಂದು ಅವಹೇಳನ ಮಾಡಿ ಅತೀ ಕೀಳು ಭಾಷೆ ಬಳಸಲಾಗಿದೆ. ಮುಸ್ಲಿಮರು ನೀವು ಎಲ್ಲಿಂದಲೋ ಬಂದವರು ಎಂದು ಉಲ್ಲೇಖಿಸಲಾಗಿದೆ. ಹಿಂದೂಗಳ ದಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಕೋಮು ಪ್ರಚೋದನೆ ಮಾಡಿದ ವಿರುದ್ಧ ಮುಸ್ಲಿಂ ಸಮುದಾಯ ಸಂಘಟನೆಗಳು ಗಮನಿಸಬೇಕು. ಇದರ ವಿರುದ್ದ ಕೇಸು ದಾಖಲಿಸಬೇಕು .ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇನ್ನೊಂದು ಧರ್ಮವನ್ನು ಅವಮಾನಿಸುತ್ತಿರುವುದು ಶೋಭೆ ತರುವಂಥದ್ದಲ್ಲ. ಇಂತಹ ಯಕ್ಷಗಾನದ ಆಟವನ್ನು ಕೊನೆಗೊಳಿಸಿ, ಇಲ್ಲದಿದ್ದರೆ ಇಂತಹ ಪಾತ್ರಧಾರಿಗಳು ಬೀದಿಯಲ್ಲಿ ಹೆಣವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಯಕ್ಷಗಾನದ ವಿಡಿಯೋ ಕ್ಲಿಪ್ ಎಲ್ಲಡೆ ಹರಿದಾಡುತ್ತಿದ್ದು ಜಿಲ್ಲೆಯಲ್ಲಿ ಇನ್ನೊಂದು ವಿವಾದ ಭುಗಿದೇಳುವ ಲಕ್ಷಣಗಳು ಕಾಣುತ್ತಿವೆ. ಕರಾವಳಿಯಲ್ಲಿ ಕೋಮುದ್ವೇಷ ಹೊಗೆಯಾಡುತ್ತಿರುವ ಸಂದರ್ಭದಲ್ಲಿ ಈ ಯಕ್ಷಗಾನ ಪ್ರಸಂಗದ ತುಣಕನ್ನು ಹರಿಬಿಟ್ಟು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂಬ ಅಭಿಪ್ರಾಯ ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂದಿದೆ.

yakshanaga

Leave a Comment