ಯಕೃತ್ ಸಮಸ್ಯೆ -ಬಿಗ್ ಬಿ ಆಸ್ಪತ್ರೆ ಗೆ

ಮುಂಬೈ, ಅ.೧೮- ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವ ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರನ್ನು ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅವರು, ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಅಮಿತಾಬ್ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆತಂದಿದ್ದು, ಅವರನ್ನು ಐಸಿಯು ಮಾದರಿಯ ಕೊಠಡಿಯಲ್ಲಿ ಇರಿಸಲಾಗಿದ್ದು, ಕುಟುಂಬ ಸದಸ್ಯರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಸಿಕೊಳ್ಳುತ್ತಿದ್ದಾರೆ. ಭಾನುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅಮಿತಾಬ್ ಬಚ್ಚನ್ ಅವರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದು, ಆರೋಗ್ಯದ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಕರ್ವಾ ಚೌತ್ ಹಬ್ಬವಿದ್ದ ಕಾರಣ ಅಮಿತಾಭ್ ತಮ್ಮ ಟ್ವಿಟ್ಟರಿನಲ್ಲಿ ಜಯಾ ಬಚ್ಚನ್ ಜೊತೆಯಿರುವ ಕಪ್ಪು-ಬಿಳಿ ಬಣ್ಣದ ಫೋಟೋವನ್ನು ಟ್ವೀಟ್ ಮಾಡಿದ್ದರು. ಅ ೧೧ರಂದು ೭೭ನೇ ವರ್ಷಕ್ಕೆ ಕಾಲಿಟ್ಟ ಅವರು, ಈ ಬಾರಿ ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ ಎಂದಿದ್ದರು. ಆಚರಿಸಲು ಏನಿದೆ? ಇದು ಸಾಮಾನ್ಯ ದಿನದಂತೆ. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ ಎಂದು ಮನವಿ ಮಾಡಿದ್ದರು.
ಕೆಲವು ದಿನಗಳ ಹಿಂದಷ್ಟೆ ಗುಲಾಬೋ ಸಿತಾಬೋ ಚಿತ್ರದ ಶೂಟಿಂಗ್ ಅನ್ನು ಅಮಿತಾಭ್ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಬ್ರಹ್ಮಾಸ್ತ್ರ, ಚೆಹರೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಕೂಲಿ ಚಿತ್ರದ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡು ರಕ್ತ ಕಳೆದುಕೊಂಡಿದ್ದ ಅಮಿತಾಬ್ ಅವರಿಗೆ ಕೆಟ್ಟ ರಕ್ತ ಪೂರೈಕೆಯಾಗಿತ್ತು. ಹೀಗಾಗಿ ಯಕೃತ್ತು ಹಾನಿಗೊಳಗಾಗಿದ್ದು, ಕೇವಲ ಶೇ ೨೫ರಷ್ಟು ಯಕೃತ್ತು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಸ್ವತಃ ಅಮಿತಾಭ್ ಬಚ್ಚನ್ ಅವರೇ ಈ ಹಿಂದೆ ತಿಳಿಸಿದ್ದರು.

Leave a Comment