ಮ.ಮ.ಬೆಟ್ಟ ದೇಗುಲಕ್ಕೆ ಭಕ್ತರ ಆಗಮನಕ್ಕೆ ಅವಕಾಶವಿಲ್ಲ

ಹನೂರು: ಮೇ.24- ಲಾಕ್‍ಡೌನ್ ಆದೇಶದ ಹಿನ್ನಲೆಯಲ್ಲಿ ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಶ್ರದ್ಧ ಭಕ್ತಿ ಕೇಂದ್ರ ಮಲೆಮಹದೇಶ್ವರ ಬೆಟ್ಟ ಮಾದಪ್ಪನ ದೇವಾಲಯದಲ್ಲಿ ದೇವರ ದರ್ಶನ ಹಾಗೂ ದೇಗುಲ ಆವರಣ ಸಮೀಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಭಕ್ತರು ಸಹಕರಿಸಬೇಕೆಂದು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ಮನವಿ ಮಾಡಿದ್ದಾರೆ.
ಆನ್‍ಲೈನ್ ವ್ಯವಸ್ಥೆ:
ಲಾಕ್‍ಡೌನ್ ಸಡಿಲಗೊಂಡ ನಂತರ ಇತ್ತಿಚಿಗೆ ಮಲೆಮಹದೇಶ್ವರ ಬೆಟ್ಟ ಸುತ್ತ ಮುತ್ತ ಗ್ರಾಮಗಳು ಸೇರಿದಂತೆ ವಿವಿಧಡೆಯಿಂದ ದೇವಾಲಯದ ಆವರಣ ಪ್ರವೇಶಿಸುವುದು ಮತ್ತು ದೇವರ ದರ್ಶನ ಪಡೆಯಲು ಜನತೆ ಬರುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಪ್ರಾಧಿಕಾರದ ಕಾರ್ಯದರ್ಶಿಗಳು ಇನ್ನೆರಡು ದಿನಗಳಲ್ಲಿ ಆನ್‍ಲೈನ್ ದೇವರ ದರ್ಶನ, ಆನ್‍ಲೈನ್ ಸೇವೆಗಳು ಮತ್ತು ಆನ್‍ಲೈನ್ ಡೊನೆಷನ್‍ಗಳಿಗೆ ಚಾಲನೆ ನೀಡುವುದರ ಜೊತೆಗೆ ಈ ಬಗ್ಗೆ ವ್ಯಾಪಾಕ ಪ್ರಚಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸೋಂಕು ತಡೆಗಟ್ಟುವುದು ಆದ್ಯ ಕರ್ತವ್ಯ:
ಇತ್ತೀಚಿಗಂತು ಮಲೆಮಹದೇಶ್ವರ ಬೆಟ್ಟದ ಸ್ಥಳಿಯರು ಹಾಗೂ ಇನ್ನಿತರೆ ಗ್ರಾಮಗಳಿಂದ ಸಂಜೆ ಹೊತ್ತು ದೇವಾಲಯಕ್ಕೆ ಬರಲಾರಂಭಿಸಿದ್ದು, ದೇವಸ್ಥಾನ ತೆರೆದಿರುವುದಿಲ್ಲ ಎಂದು ಎಷ್ಟೆ ಹೇಳಿದರು ಭಕ್ತರು ಕೇಳದೆ ಇರುವ ಹಿನ್ನಲೆಯಲ್ಲಿ ಅದರಲ್ಲೂ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ದೇವಾಲಯದ 100 ಮೀ. ಸುತ್ತ ಭಕ್ತಾದಿಗಳು ಸುತ್ತಾಡುವುದು, ದೇವಸ್ಥಾನ ಪ್ರವೇಶಿಸಲು ಯತ್ನಿಸುವುದನ್ನು ತಡೆಯಲಾಗಿದೆ. ಬ್ಯಾರಿಕೆಡ್‍ಗಳನ್ನು ಅಳವಡಿಸಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ ದೇವಾಲಯದ ಸುತ್ತ 100 ಮೀ. ಹೊರತುಪಡಿಸಿ ಪ್ರಾಧಿಕಾರದ ಇತರಡೆಗಳಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ನಿಷೇಧಾಜ್ಞೆಯ ಷರತ್ತುಗಳನ್ನು ಪಾಲಿಸಿಕೊಂಡು ಓಡಾಡಲು ಹಾಗೂ ಸಂಚರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.

Share

Leave a Comment