ಮ್ಯಾನ್‌ಹೋಲ್ ಮುಚ್ಚಿದ ಪೋಲಿಸರಿಗೆ ಪ್ರಶಂಸೆ

ಬೆಂಗಳೂರು, ಆ ೨೯- ಸಿಲಿಕಾನ್ ಸಿಟಿಯಲ್ಲಿನ ಹಲವಾರು ರಸ್ತೆಗಳಲ್ಲಿ ಬೃಹತ್ ಮ್ಯಾನಹೊಲ್‌ಗಳು ಬಾಯ್ತಿರೆದು ಮೃತ್ಯುವಿಗೆ ಆಹ್ವಾನ ನೀಡುತ್ತಿವೆ. ಇದನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವ ಬೆನ್ನಲೇ ಕುಮಾರಸ್ವಾಮಿ ಲೇಜೌಟ್‌ನಲ್ಲಿ ಸ್ಥಳೀಯ ಪೋಲಿಸರೇ ರಸ್ತೆಗಳಲ್ಲಿ ತೆರದ ಮ್ಯಾನಹೋಲ್‌ನ್ನು ಮುಚ್ಚಿ ಸಾರ್ಥಕತೆ ಮೆರೆದಿದ್ದಾರೆ.

ಹೌದು ಇಲ್ಲಿನ ಅಂಜನಾಪುರ ವಾರ್ಡ್‌ನ ಡಬ್ಬಲ್ ರೋಡ್‌ನಲ್ಲಿ ರಸ್ತೆ ಗುಂಡಿ ಮತ್ತು ತೆರೆದ ಮ್ಯಾನ್ ಹೋಲ್ ಮುಚ್ಚುವಂತೆ ಸ್ಥಳೀಯ ಬಿಬಿಎಂಪಿ ಕಚೇರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಆದರೆ ಬಿಬಿಎಂಪಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಾಲಿಕೆ ಅಧಿಕಾರಿಗಳ ಜಾಣ ಕಿವುಡುತನಕ್ಕೆ ಬೇಸತ್ತ ಟ್ರಾಫಿಕ್ ಪೊಲೀಸರು ತಾವೇ ರಸ್ತೆ ಗುಂಡಿಗಳು ಮತ್ತು ಮ್ಯಾನ್ ಹೋಲ್‌ಗಳನ್ನು ಮುಚ್ಚಿದ ಘಟನೆ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದು, ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಪೊಲೀಸರು ಕೂಡ ಸ್ಥಳೀಯರು ರಸ್ತೆಯಲ್ಲಿ ಪಡುವ ಪಡಿಪಾಟಲುಗಳನ್ನ ನೋಡಿ ಬೇಸತ್ತುಬಿಟ್ಟಿದ್ದರು. ಈ ಬಗ್ಗೆ ಯಾವಾಗ ಸ್ಥಳೀಯ ಸಂಸ್ಥೆ ತಲೆಕೆಡಿಸಿಕೊಂಡೇ ಇಲ್ಲ ಎನ್ನುವುದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂತೋ ಆಗಲೇ ಪೊಲೀಸರು ಕ್ರಮಕ್ಕೆ ಮುಂದಾಗಿ, ಅಂಜನಾಪುರ ವಾರ್ಡ್ ನ ಡಬ್ಬಲ್ ರೋಡ್ ನಲ್ಲಿರುವ ರಸ್ತೆ ಗುಂಡಿಗಳು ಮತ್ತು ಮ್ಯಾನ್ ಹೋಲ್‌ಗೆ ಪೊಲೀಸರೇ ಮಣ್ಣು ತುಂಬಿದ್ದಾರೆ.

ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಗುಂಡಿ ಬಿದ್ದ ರಸ್ತೆಗಳು ಮತ್ತು ಬಾಯ್ತೆರೆದಿದ್ದ ಮ್ಯಾನ್ ಹೋಲ್‌ಗಳಿಂದ ವಾಹನ ಸವಾರರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೇ ಕಾರಣಕ್ಕೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಗುಂಡಿಗಳನ್ನ ಮುಚ್ಚಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಎಎಸ್‌ಐ ಆದಂತಾ ಕೃಷ್ಣಯ್ಯ ಮತ್ತು ನಾಲ್ವರು ಟ್ರಾಫಿಕ್ ಪೊಲೀಸ್ ಪೇದೆಗಳು ರಸ್ತೆ ಗುಂಡಿ ಮುಚ್ಚಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಸ್ಯೆ ಆಲಿಸದ ಸ್ಥಳೀಯ ಕಾರ್ಪೊರೇಟರ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Comment