ಮ್ಯಾನ್‌ಹೋಲ್‌ಗಿಳಿದ ಐವರು ಕಾರ್ಮಿಕರ ಸಾವು

ನವದೆಹಲಿ.ಸೆ.೧೦-ಒಳಚರಂಡಿ ಸ್ವಚ್ಚಗೊಳಿಸುತಿದ್ದ  ಐವರು ಪೌರಕಾರ್ಮಿಕರು ವಿಷ ಪೂರಿತ ಗಾಳಿ ಸೇವಿಸಿ ನಂತರ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಜಧಾನಿ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ನಿನ್ನೆ ನಡೆದಿದೆ.
ಮೃತಪಟ್ಟವರೆಲ್ಲರೂ ೨೨ ರಿಂದ ೩೦ ವರ್ಷಗಳ ಖಾಸಗಿ ಪೌರಕಾರ್ಮಿಕರು ಎನ್ನಲಾಗಿದ್ದು, ನಿನ್ನೆ ಅಪರಾಹ್ನ ಈ ಐವರು ಮೋತಿ ನಗರದ ಡಿಎಲ್‌ಎಫ್ ಫ್ಲಾಟ್ ಬಳಿ ಒಳಚರಂಡಿ ಸ್ವಚ್ಚಗೊಳಿಸುತ್ತಿದ್ದಾಗ ವಿಷಪೂರಿತ ಗಾಳಿ ಹೊರಹೊಮ್ಮಿ ಇಬ್ಬರು ಮೃತಪಟ್ಟಿದ್ದರು. ಉಳಿದ ಮೂವರು ಪಂಡಿತ್ ದೀನ್ ದಯಾಳ್ ಉಪಾಧ್ಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈಗಾಗಲೆ ದೆಹಲಿಯಲ್ಲಿ ಇಂಥ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಒಳ ಚರಂಡಿ ವ್ಯವಸ್ಥೆಗೆ ಆಡಳಿತ ನಡೆಸುತ್ತಿರುವ  ಆಮ್ ಆದ್ಮಿ ಪಾರ್ಟಿ(ಎಎಪಿ) ಸರ್ಕಾರವೇ ಹೆಚ್ಚು ಗಮನ ಹರಿಸುತ್ತಿಲ್ಲ ,ಯಂತ್ರಗಳ ಬಳಕೆಯಿಂದ ಸ್ವಚ್ಚಗೊಳಿಸಬೇಕಾದ ಒಳಚರಂಡಿಯನ್ನು ಪೌರಕಾರ್ಮಿಕರನ್ನು ಬಳಸಿದ್ದೆ ಈ ಅನಾಹುತಕ್ಕೆ ಕಾರಣ, ಸರ್ಕಾರ ಈಗಾಗಲೇ ಒಳಚರಂಡಿ ಸ್ವಚ್ಚತೆಗೆ ಯಂತ್ರಗಳನ್ನು ಬಳಸುವುದಾಗಿ ಭರವಸೆ ನೀಡಿತ್ತು. ಭರವಸೆ ನೀಡಿ ಹಲವು ದಿನಗಳು ಕಳೆದರೂ ಸರ್ಕಾರ ಯಂತ್ರ ಬಳಕೆಗೆ ಕ್ರಮಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಈ ಅವಘಡಕ್ಕೆ ಆಮ್ ಆದ್ಮಿ ನೇತೃತ್ವದ ಸರ್ಕಾರವೆ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಮೃತರ ಕುಟುಂಬಗಳಿಗೆ ತಲಾ ೫೦ ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ೯೯ನೇ ವಾರ್ಡ್‌ನ ಕೌನ್ಸಿಲರ್ ಸುನಿತಾ ಮಿಶ್ರಾ ಘಟನೆಯನ್ನು ಖಂಡಿಸಿ ದೆಹಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Comment