ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ

ಚಾಮರಾಜನಗರ, ಫೆ. 6- ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣವನ್ನು ಪಡೆದುಕೊಳ್ಳುವ ಜೊತೆಗೆ ಸಂಸ್ಕಾರಯುತ ಜೀವನ ಶೈಲಿಯನ್ನು ರೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹರವೆ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮಿ ಕರೆ ನೀಡಿದರು.
ತಾಲೂಕಿನ ಹರವೆ ಗ್ರಾಮದಲ್ಲಿರುವ ಶ್ರೀ ಚನ್ನಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ ಮಹಾರಾಜ ಕಾಲದಲ್ಲಿ ಶಿಕ್ಷಣವನ್ನು ಗುರುಕುಲದಲ್ಲಿ ನೀಡಲಾಗುತ್ತಿತ್ತು. ಗುರುಗಳ ಸಾನಿಧ್ಯದಲ್ಲಿ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಸುಸಂಸ್ಕೃತ ನಡವಳಿಕೆಯನ್ನು ಕಲಿಸಲಾಗುತ್ತಿದೆ. ಗುರುಕುಲ ಪದ್ದತಿಗಳು ನಶಿಸಿಹೋಗಿ, ಶಾಲಾ ಕಾಲೇಜುಗಳು ಬಂದಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವಂತಹ ಶಿಕ್ಷಣ ಹಾಗು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ವಿದ್ಯೆ ಪಡೆಯುವುದು ಒಂದು ಭಾಗವಾದರೆ, ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ರೂಡಿಸಿಕೊಳ್ಳುವುದು ಶಿಕ್ಷಣದ ಮತ್ತೋಂದು ಭಾಗವಾಗಿದೆ. ಬಸವಣ್ಣ ನವರು ಹೇಳುವಂತೆ ಸದುವಿನಯವೇ ಸದಾಶಿವನ ಒಲುಮೆಯಯ್ಯಾ ಎಂಬ ವಚನದಂತೆ ವಿದ್ಯಾರ್ಥಿ ಜೀವನದಲ್ಲಿ ವಿನಯ ಪ್ರದರ್ಶನ ಮುಖ್ಯವಾಗಬೇಕು ಎಂದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಸಕ ಜವರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ವ್ಯಾಸಂಗ ದ ಅವಧಿಯಲ್ಲಿ ವಿದ್ಯಾಥಿಘಳು ಮೊಬೈಲ್ ಸಂಪರ್ಕದಿಂದ ದೂರ ಉಳಿಬೇಕು. ಈಚಿನ ದಿನಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಮುಂಚೂಣಿಯಲ್ಲಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾನಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಅವರ ಮುಂದಿನ ಭವಿಷ್ಯ ಕತ್ತಲಲ್ಲಿ ಬೀಳುವ ಆತಂಕವಿದೆ. ಪೋಷಕರು ಮನೆಯಲ್ಲಿ ವಿದ್ಯಾರ್ಥಿಗಳು ಓದಲು ಅವಕಾಶ ಮಾಡಿಕೊಡಬೇಕು. ದೂರದರ್ಶನದ ವಿಕ್ಷಣೆಯಿಂದಲೂ ಅವರನ್ನು ದೂರವಿಡಬೇಕು. ಅವರ ಮನಸ್ಸು ಓದುವುದು. ಬರೆಯುವುದು ವಿಷಯಗಳ ಗ್ರಹಿಕೆಯತ್ತ ಹೊರಳಬೇಕು ಅಂತಹ ವಾತಾವರಣ ವಿದ್ಯಾರ್ಥಿಗಳಲ್ಲಿ ಬರಬೇಕು ಎಂದರು.
ಜಿ.ಪಂ. ಸದಸ್ಯ ಕೆರಹಳ್ಳಿ ನವೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲೂ ಮಠಮಾನ್ಯಗಳು ತಮ್ಮ ಛಾಪು ಮೂಡಿಸುತ್ತಿವೆ. ಈಚಿನ ದಿನಗಳಲ್ಲಂತೂ ಮಠಗಳು ಅನ್ನ ದಾಸೋಹದ ಜತೆಗೆ ವಿದ್ಯಾ ದಾಸೋಹಕ್ಕು ಮುಂದಾಗಿದ್ದು, 12ನೇ ಶತಮಾನದ ಬಸವಾದಿ ಶರಣರ ಸಮ ಸಮಾಜದ ಪರಿಕಲ್ಪನೆಯನ್ನು 21ನೇ ಶತಮಾನದಲ್ಲಿಯೂ ಸಾಕಾರಗೊಳಿಸುತ್ತಿರುವುದು ಪ್ರಶಂಸನೀಯ ಎಂದರು
ಬಳಿಕ ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರು ಹಾಗೂ ಸಾರ್ವಜನಿಕರನ್ನು ರಂಜಿಸಿತು. ಸಮಾರಂಭದಲ್ಲಿ ತಾ.ಪಂ. ಸದಸ್ಯ ರೇವಣ್ಣ, ಕ್ಷೇತ್ರಶಿಕ್ಷಣಾಧಿಕಾರಿ ಲಕ್ಷ್ಮಿಪತಿ, ಲಯನ್ ಪ್ರಭುಸ್ವಾಮಿ, ಮಲೆುಯೂರು ನಾಗೇಂದ್ರ, ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನದ ಕಾರ್ಯದರ್ಶಿ ಎಚ್.ಎನ್. ಗಿರೀಶ್, ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ನಾಗರಾಜು, ಮುಖ್ಯ ಶಿಕ್ಷಕ ಲೋಕೇಶ್ ಹಾಗೂ ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

Leave a Comment