ಮೌನಾನುಷ್ಠಾನ ಮಹಾಮಂಗಲ ಕಾರ್ಯಕ್ರಮ

ಲಕ್ಷ್ಮೇಶ್ವರ,ಸೆ12: ಸಮೀಪದ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳವರು ಕಳೆದ 33 ದಿನಗಳಿಂದ ಕೈಗೊಂಡ ಮೌನಾಷ್ಠಾನ ಮಂಗಳವಾರ ಸಮಾಧಾನ ಆಶ್ರಮ ಕಲಬುರ್ಗಿಯ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾಮಂಗಲವಾಯಿತು.

 
ದಿಂಗಾಲೇಶ್ವರ ಮಹಾಸ್ವಾಮಿಗಳು ಆ.11ರಿಂದ ಸ.11ವರೆಗೆ ಶ್ರೀಮಠದಲ್ಲಿ ಮೌನಾಷ್ಠಾನ ಕೈಗೊಂಡು  ತ್ರಿಕಾಲ ಪೂಜೆ, ಜಪ, ಧ್ಯಾನ, ಮಂತ್ರ ಬರಹ-ಪಠಣ, ಪ್ರಾಣಾಯಾಮ, ಯೋಗ ಹಾಗೂ ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ತಲ್ಲೀನರಾಗಿದ್ದರು.

 

 
ಶ್ರೀಗಳು ಮೌನ ಮತ್ತು ಧ್ಯಾನದಿಂದ ಮನಶುದ್ಧಿ, ಆಹಾರ ವಜ್ರ್ಯದಿಂದ ದೇಹ ಶುದ್ಧಿಗೊಳಗಾಗುವ ಆ ಮೂಲಕ ತಮ್ಮ ಅಂತಃಶಕ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಳೆದ 25 ವರ್ಷಗಳಿಂದ ಪ್ರತಿವರ್ಷ 1 ರಿಂದ 2 ತಿಂಗಳ ಕಾಲ ಆಹಾರ, ನಿದ್ರೆ ತ್ಯೇಜಿಸಿ ಮೌನಾನುಷ್ಠಾನ ಕೈಗೊಳ್ಳುತ್ತಾ ಬಂದಿದ್ದಾರೆ. 7-8 ವರ್ಷ ಹಿಮಾಲಯ ವಿವಿಧ ಪ್ರಯಾಗಗಳಲ್ಲಿ, ಗಂಗಾವತಿ ಮಾರ್ಕಂಡೇಶ್ವರ ದೇವಸ್ಥಾನ, ಹರಪನಹಳ್ಳಿ-ಹೂವಿನ ಹಡಗಲಿ ಸೂಗಿ ಬೆಟ್ಟ, ಸೊರಬ ತಾಲೂಕು ಮೂಡಿ ಸೇರಿ ಬಾಲೇಹೊಸೂರಿನ ಶ್ರೀಮಠದಲ್ಲಿ ಹೆಚ್ಚಿನ ಸಮಯ ಅನುಷ್ಠಾನ ಕೈಗೊಂಡಿದ್ದಾರೆ.

 

 
ಮಂಗಳವಾರ ಮಠದಲ್ಲಿ ನಡೆದ ಅನುಷ್ಠಾನ ಮಹಾಮಂಗಲದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಶ್ರೀಗಳ ಕುರಿತು ಮಾತನಾಡಿ, ಈ ನಾಡಿನ ಅದ್ಬುತ ವಾಗ್ಮೀಗಳು, ಪ್ರವಚನಕಾರರು, ಧರ್ಮ ಸಂರಕ್ಷಣೆ, ಪ್ರಚಾರಕ್ಕಾಗಿ ತಮ್ಮನ್ನೇ ತೊಡಗಿಸಿಕೊಂಡ ನೇರ ನಿಷ್ಠುರ ನಡೆಯುಳ್ಳ ದಿಂಗಾಲೇಶ್ವರ ಸ್ವಾಮಿಗಳು ದೊಡ್ಡ ಶಕ್ತಿಯಾಗಿದ್ದಾರೆ. ಪ್ರತಿ ವರ್ಷ ಶ್ರೀಗಳು ತಮ್ಮ ಹಲವಾರು ಕಾರ್ಯಕ್ರಮದ ಒತ್ತಡಗಳ ನಡುವೆ ಕೈಗೊಳ್ಳುವ ಧ್ಯಾನ, ಮೌನ, ಯೋಗ-ಮಂತ್ರ ಸಿದ್ಧಿಯಿಂದ ತಮ್ಮ ಆಂತರಂಗಿಕ ಶಕ್ತಿ, ಜ್ಞಾನ ಸಂಪಾಧನೆ ದ್ವಿಗುಣಗೊಳಿಸಿಕೊಳ್ಳುತ್ತಾರೆ. ಈ ಮೂಲಕ ಲೋಕ ಕಲ್ಯಾಣ, ಭಕ್ತರ ಸಂಕಷ್ಟ ಹರಣ, ಸಾಮಾಜದ ಸುಧಾರಣೆ, ಧರ್ಮ ಸಂರಕ್ಷಣೆ, ಧರ್ಮ ಪ್ರಚಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಶಕ್ತಿಯಾಗಿದ್ದಾರೆ ಎಂದು ಹೇಳಿದರು.

 
ಈ ಸಂದರ್ಭದಲ್ಲಿ ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಸದಾಶಿವಪೇಟೆಯ ಗದಗೇಶ್ವರ ಮಹಾಸ್ವಾಮಿಗಳು, ಗೊಗ್ಗಿಹಳ್ಳಿ ಸಂಗಮೇಶ್ವರ ಶಿವಾಚಾರ್ಯರು, ಜಡೆಯ ಹಿರೇಮಠದ ಅಮರೇಶ್ವರ ಶಿವಾಚಾರ್ಯರು, ಕುಂದಗೋಳ ಕಲ್ಲಾಣಪುರ ಮಠದ ಬಸವಣ್ಣಜ್ಜನವರು, ಕುಕನೂರ ಹಿರೇಮಠದ ಚನ್ನಮಲ್ಲ ದೇವರು, ಮುದೇನೂರು ಹಿರೇಮಠದ ಸಿದ್ಧಲಿಂಗದೇವರು, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ನಿಂಗಪ್ಪ ಮೈಲಾರ, ಚನ್ನಪ್ಪ ಮಲ್ಲಾಡದ, ಜೋಗಯ್ಯ ಹಿರೇಮಠ ಸೇರಿದಂತೆ ಗ್ರಾಪಮ ಅಧ್ಯಕ್ಷ-ಉಪಾಧ್ಯಕ್ಷ, ಗ್ರಾಮದ ಹಿರಿಯರು, ಭಕ್ತರು ಹಾಜರಿದ್ದರು.

Leave a Comment