ಮೌಢ್ಯಾಚರಣೆ ಆರಂಭಿಸಿದ ರಮ್ಮನಹಳ್ಳಿ ಗ್ರಾಮಸ್ಥರು :

ಮನೆ ಬಾಗಿಲಿಗೆ ಬೇಲಿ ಮುಳ್ಳಿನ ಕಾಯಿ ಕಟ್ಟಿದ ಗ್ರಾಮಸ್ಥರು
ಮೈಸೂರು, ಏ.3:- ಕೊರೋನಾ ಮಹಾಮಾರಿಯಿಂದ ಮತ್ತೊಂದು ಮೌಢ್ಯಾಚರಣೆ ಜಾರಿಗೆ ಬಂದಂತಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಆಚರಣೆ ಶುರುವಾಗಿದೆ. ಬೇಲಿ ಮುಳ್ಳಿನ ಕಾಯಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದ್ದು, ಕೊರೋನಾ ಚಿತ್ರವನ್ನೇ ಹೋಲುವ ಬೇಲಿ ಮುಳ್ಳಿನ ಕಾಯಿಗೆ ಕೊರೋನಾ ಕಾಯಿ ಅಂತ ನಾಮಕರಣ ಮಾಡಲಾಗಿದೆ.
ಮೈಸೂರು ಸಮೀಪ ರಮ್ಮನಹಳ್ಳಿ ಸುತ್ತಮುತ್ತ ಕೊರೋನಾ ಕಾಯಿಗಾಗಿ ಜನರು ಹುಡುಕಾಟ ನಡೆಸಿದ್ದು, ಮನೆ ಮುಂದೆ ಕೊರೋನಾ ಕಾಯಿ ಜೊತೆ ಮಾವಿನಸೊಪ್ಪು, ಬೇವಿನ ಸೊಪ್ಪು ತೋರಣ ಮಾಡಿ ಕಟ್ಟಿದರೆ ಕೊರೋನಾ ವೈರಸ್ ಬರೋದಿಲ್ಲ ಎನ್ನಲಾಗುತ್ತಿದೆ. ಕೊರೋನಾ ಕಾಯಿ ಈಗ ಹಲವು ಹಳ್ಳಿಗಳಲ್ಲಿ ಭಾರೀ ಫೇಮಸ್ ಆಗಿದ್ದು, ಕೊರೋನಾ ಕಾಯಿಗೆ ಅರಿಶಿನ, ಕುಂಕುಮ ಹಚ್ಚಿ ಗ್ರಾಮಸ್ಥರು ತೋರಣವನ್ನು ಮಾಡಿ ಕಟ್ಟುತ್ತಿದ್ದಾರೆ. ಎಲ್ಲರ ಮನೆ ಮುಂದೆ ಕೊರೋನಾ ತಡೆಯಲು ಕೊರೋನಾ ಕಾಯಿ ಕಟ್ಟಿ ನಿಟ್ಟುಸಿರು ಬಿಡುತ್ತಿದ್ದಾರೆ. ಬಾಯಿಂದ ಬಾಯಿಗೆ ಮೌಢ್ಯ ಹರಡುತ್ತಿದ್ದು, ರಮ್ಮನಹಳ್ಳಿ ಯಿಂದ ಈಗ ಆಸುಪಾಸಿನ ಹಳ್ಳಿಗೂ ಮೌಢ್ಯಾಚರಣೆ ತಲುಪಿದೆ. ಎಲ್ಲರ ಮನೆ ಮುಂದೆ ಕೊರೋನಾ ಕಾಯಿಯ ತೋರಣ ಕಂಡುಬರುತ್ತಿದೆ. ಕೊರೋನಾ ಚಿತ್ರ ನೋಡಿದ್ರೆ ಸಾಕು ಬೇಲಿ ಮುಳ್ಳಿನ ಕಾಯಿಯ ತದ್ರೂಪದಂತೆ ಕಂಡು ಬರುತ್ತಿದ್ದು, ಗ್ರಾಮಸ್ಥರು ನಾ ಮುಂದು, ತಾ ಮುಂದು ಅಂತ ಬೇಲಿ ಮುಳ್ಳಿನ ಕಾಯಿಗಾಗಿ ಶೋಧ ನಡೆಸಿದ್ದಾರೆ.

Leave a Comment