ಮೋಹನ್ ಭಾಗವತ್ ಹೇಳಿಕೆಗೆ ಅಸದುದ್ದೀನ್ ಉವೈಸಿ ಆಕ್ರೋಶ

ಹೈದ್ರಾಬಾದ್, ಅ.9 – ಭಾರತ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆ ದೇಶದ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧವಲ್ಲ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್  ಹೇಳಿಕೆಯನ್ನು  ಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ವಿರೋಧಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಯಾವುದೇ ಹಕ್ಕುಗಳನ್ನು ಕಲ್ಪಿಸದೆ ಅವರನ್ನು ಕೇವಲ ಈ ದೇಶದ  ವಾಸಿಗಳೆಂದು  ಪರಿಗಣಿಸಲಾಗುತ್ತಿದೆ.   ವಾಸ್ತವವಾಗಿ ಅವರ ಆಲೋಚನೆಗಳು ಇದೇ ಆಗಿದೆ ಎಂದು ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿರುವ  ಆರ್ ಎಸ್ಎಸ್ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್,  ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆ ಅಲ್ಪಸಂಖ್ಯಾತರ ವಿರುದ್ಧವಲ್ಲ ಎಂದು ಹೇಳಿದ್ದರು.  ಗೋರಕ್ಷಣೆಗಾಗಿ  ಆರ್‌ಎಸ್‌ಎಸ್ ಕರೆ ನೀಡುತ್ತದೆ.  ಆದರೆ,  ಆರ್‌ಎಸ್‌ಎಸ್ ಗೂ  ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಆರ್‌ಎಸ್‌ಎಸ್ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿಲ್ಲ. ವಾಸ್ತವವಾಗಿ ಗುಂಪು ಹತ್ಯೆ  ಎಂಬುದು ವಿದೇಶಿ ಸಂಸ್ಕೃತಿ ಎಂದು ವ್ಯಾಖ್ಯಾನಿಸಿದ್ದರು.

ಆದರೆ, ಮೋಹನ್ ಭಾಗವತ್  ಅವರ ಹೇಳಿಕೆಗೆ, ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಉವೈಸಿ, ಹಿಂದೂ ರಾಷ್ಟ್ರ  ಪರಿಕಲ್ಪನೆ  ಹಿಂದೂ ಬಹುಮತವಾದದಿಂದ ಬಂದಿದೆ. ಇದು ಹಿಂದೂಯೇತರ ಸಮುದಾಯಗಳ ನಿಯಂತ್ರಿಸಲು ಬಂದಿದೆ. ಸ್ಪಷ್ಟವಾಗಿ ಹೇಳುವುದಾದರೆ, ಅಲ್ಪಸಂಖ್ಯಾತರು ಭಾರತೀಯರು. ಆದರೆ ಅವರಿಗೆ ಯಾವುದೇ ಹಕ್ಕುಗಳಿಲ್ಲ. ಸಂವಿಧಾನದ ಪ್ರಕಾರ, ನಾವೆಲ್ಲರೂ ಭಾರತೀಯರು. ಆದರೆ,  ಹಿಂದೂ ರಾಷ್ಟ್ರ ಏಕೆ?  ಎಂದು ಪ್ರಶ್ನಿಸಿರುವ  ಅವರು, ಇದು ಕೇವಲ ಅಭದ್ರತೆಯ ಭಾವನೆಯಿಂದ ಮೂಡಿಬಂದಿರುವ ಊಹಾತ್ಮಕ ಪ್ರಲಾಪ ಎಂದು ಟ್ವೀಟ್ ಮಾಡಿದ್ದಾರೆ.

Leave a Comment