ಮೋಸ ಮಾಡುತ್ತಾರೆಂದು ತಿಳಿದೂ ಚುನಾವಣೆಗೆ ನಿಂತು ಸೋತೆ : ಎಚ್ ಡಿ ದೇವೇಗೌಡ

ಹಾಸನ ,ಆ 24- ಧರ್ಮರಾಯ ಒಂದೇ ಒಂದು ಆಟ ಎಂದು ಹೇಳಿ ಎಲ್ಲವನ್ನು ಕಳೆದುಕೊಂಡು ಕೊನೆಯ ದಾಳ ಉರುಳಿಸುತ್ತಾನೆ, ತಾನು ಮೋಸಗಾರನ ಜೊತೆಯಲ್ಲಿಯೇ ಆಡುತ್ತಿದ್ದೇನೆಂದು ಹಸ್ತಿನಾಪುರದ ರಾಜನಿಗೆ ಧರ್ಮರಾಯ ಹೇಳುತ್ತಾನೆ ಅದೇ ರೀತಿ ತಮಗೂ ಮೋಸ ಹೋಗುವುದು ತಿಳಿದಿದ್ದರೂ ಚುನಾವಣೆಗೆ ಸ್ಪರ್ಧಿಸಿ ಸೋತೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತುಮಕೂರು ಚುನಾವಣಾ ಸೋಲನ್ನು ಮಹಾಭಾರತದ ಉಪಕಥೆಗಳ ಮೂಲಕ ವಿಶೇಷವಾಗಿ ವಿಶ್ಲೇಷಿಸಿದರು.
ಹೊಳೆನರಸಿಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮರಾಯ ಸುಮ್ಮನೆ ಕಾಲಹರಣ ಮಾಡದೆ ಸಮಯ ಕಳೆಯಲು ಅವಕಾಶ ಇದೆ ಎಂದು ಹೇಳಿ ಜೂಜಾಟವಾಡಿ ಎಲ್ಲವನ್ನು ಕಳೆದುಕೊಂಡು ದ್ರೌಪದಿಯಿಂದ ಶಾಪಕ್ಕೂ ಒಳಗಾಗುತ್ತಾನೆ. ಇಷ್ಟಾದರೂ ಒಂದೇ ಆಟ ಎಂದು ಹೇಳಿ ಕೊನೆಯ ಆಟ ಆಡುತ್ತಾನೆ. ಆಗ ಮೋಸಗಾರನ ಜೊತೆಯಲ್ಲಿಯೇ ಆಡುತ್ತೇನೆ ಎಂದು ಧರ್ಮರಾಯ ಹಸ್ತಿನಾಪುರದ ರಾಜನಿಗೆ ಹೇಳುತ್ತಾನೆ. ಅದೇ ರೀತಿ ತಾವು ಕೂಡ ಮೋಸ ಹೋಗುವುದು ಗೊತ್ತಿದ್ದರೂ ಚುನಾವಣೆಗೆ ನಿಂತು ಸೋತೆ ಎಂದರು.
ಕಳೆದ 15 ದಿನಗಳಿಂದ ಪಕ್ಷದ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು, ಪದಾಧಿಕಾರಿಗಳ ಆಯ್ಕೆ, ಸಂಘಟನೆ, ಸಭೆಗಳನ್ನು ನಡೆಸುತ್ತಿದ್ದೇನೆ. ತಮ್ಮ ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ. ತಮ್ಮ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದು, ಅವರೇ ತಮಗೆ ಶಕ್ತಿ. ರಾಜಕಾರಣ ಮಾಡಲು ತಾವು ದೆಹಲಿಗೆ ಹೋಗುವುದಿಲ್ಲ ಎಂದರು.
ಎಚ್.ವಿಶ್ವನಾಥ್ ಪಕ್ಷ ತೊರೆದ ಮೇಲೆ ಎಚ್ ಕೆ ಕುಮಾರಸ್ವಾಮಿ ಪಕ್ಷ ನಿಷ್ಠೆಯಿಂದ ಇದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಮೂರು ವರ್ಷ ಎಂಟು ತಿಂಗಳು ಸರ್ಕಾರ ನಡೆಸಲು ನಮ್ಮ ಯಾವುದೇ ತಕರಾರು ಇಲ್ಲ. ಒಳ್ಳೆಯ ಕೆಲಸ ಮಾಡಿದರೆ ಸಂತೋಷ, ಇಲ್ಲದಿದ್ದಲ್ಲಿ ಜನರಿಗಾಗಿ ಹೋರಾಡುತ್ತೇವೆ ಎಂದು ಅವರು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರ ಇದೆ. ಕೇಂದ್ರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನುವ ಭರವಸೆ ತಮಗಿದೆ. ವಾಜಪೇಯಿ ಪ್ರಧಾನಿ ಆಗಿದ್ದಾಗ ತಾವು ಬರ ಪರಿಹಾರಕ್ಕಾಗಿ ದೆಹಲಿಗೆ ರೈತರ ನಿಯೋಗ ಕರೆದುಕೊಂಡು ಹೋಗಿದ್ದೆ. ಈಗ ವಿಧಾನಸಭೆ, ಲೋಕಸಭೆ ಸದಸ್ಯನಲ್ಲದಿದ್ದರೂ ಹೋರಾಟದ ರಾಜಕಾರಣ ಮಾಡುತ್ತೇನೆ ಎಂದರು.

ಪ್ರಧಾನಿ ಹಾಗೂ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ವಿಚಾರಗಳಲ್ಲಿಯೂ ಗಮನ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೆ. ಅದಕ್ಕೆ ದೈವಾನುಗ್ರಹ ಬೇಕು. ಇದಕ್ಕಾಗಿ ಪ್ರತಿವರ್ಷ ದೇವರ ಬಳಿ ಹೋಗುತ್ತೇನೆ ಎಂದು ಅವರು ಹೇಳಿದರು.
ಹಾಸನದ ವಿಧಾನಸಭಾ ಕ್ಷೇತ್ರದಿಂದ 25 ವರ್ಷ ಶಾಸಕನಾಗಿ ಹಾಗೂ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಜನತೆಗೆ ನೋವಿದೆ. ನೀವು ಜಿಲ್ಲೆಯಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದರು. ಆದರೆ ಕೆಲವೊಮ್ಮೆ ವಿಧಿ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ದೇವೇಗೌಡ ವಿಷಾದಿಸಿದರು.
ದೇವೇಗೌಡರ ಸಂದರ್ಶನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಗ್ಗೆ ಮಾತಾಡಿದ ಅವರು, ಆ ವಿಚಾರದ ಈಗ ಮತ್ಯಾಕೆ, ಜನರ ಬಳಿ ಹೋಗೋಣ, ಅವರೇ ತೀರ್ಮಾನಿಸುತ್ತಾರೆ. ಮುಂದೆ ಹೋರಾಟ ಮಾಡುವವನು ನಾನೇ ತಾನೇ, ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಮಾತಾಡುತ್ತೇನೆ. ಸಿದ್ದರಾಮಯ್ಯ ಕುರಿತು ಪದೇ ಪದೇ ಹೇಳಿಕೊಳ್ಳುವ ಅವಶ್ಯಕತೆ ತಮಗೆ ಇಲ್ಲ. ನನಗೆ ಈ ಪಕ್ಷ ಸಂಘಟಿಸುವುದೇ ದೊಡ್ಡ ವಿಚಾರ. ನನ್ನ ಪಕ್ಷದ ಕಾರ್ಯಕರ್ತರ ಮೇಲೆ ನನಗೆ ಭರವಸೆ ಇದೆ ಎಂದು ಹೇಳಿದರು.
ರೇವಣ್ಣ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಿಖಿಲ್ ಸಹ ಕೆಲಸ ಪ್ರವಾಸ ಕೈಗೊಂಡಿದ್ದು, ಸೋತರೂ ಸಹ ಕೆಲಸ ಮಾಡುತ್ತೇವೆ. ಜನರ ತೀರ್ಮಾನಕ್ಕೆ ತಲೆಬಾಗಿದ್ದೇವೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆಯೋ ಕಾದು ನೋಡೋಣ ಎಂದರು.
ನಮ್ಮ ಪಕ್ಷದಲ್ಲಿ ನಾನೇ ಹೋರಾಟ ಮಾಡಬೇಕು ಇಲ್ಲವೇ ಕುಮಾರಸ್ವಾಮಿ ಹೋರಾಟ ಮಾಡಬೇಕು. ಆದರೀಗ ಇಬ್ಬರು ಕುಮಾರಸ್ವಾಮಿಗಳು ಇದ್ದಾರೆ. ನಾವು ಜನರ ಬಳಿಯೇ ಇದ್ದೇವೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನು ಜನತೆ ನಂಬಬೇಕಲ್ಲ. ಇರಲಿ, ಎಲ್ಲವನ್ನು ಸಮಯ ಬಂದಾಗ ಹೇಳುತ್ತೇನೆ. ದೇವೇಗೌಡರನ್ನು ಮುಗಿಸಲು ಬಂದವರ ಕತೆ ಮುಗಿದು ಹೋಗಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಎಐಸಿಸಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಹೊಸ ಜವಬ್ದಾರಿ ತೆಗೆದುಕೊಂಡಿದ್ದಾರೆ. ಅವರು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಎಂದು ಹೇಳಿದ್ದಾರೆ, ಸೋನಿಯಾ ಗಾಂಧಿ ಅವರು ಒಪ್ಪಿದರೆ ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಮುಂದಿನ ತೀರ್ಮಾನ ಇಲ್ಲದಿದ್ದಲ್ಲಿ ಉಪಚುನಾಣೆಯಲ್ಲಿ ಏಕಾಂಗಿ ಹೋರಾಟ ಮಾಡುತ್ತೇವೆ. ಕಳೆದ ಚುನಾವಣೆಯಲ್ಲಿ ಪೆಟ್ಟು ಬಿದ್ದಿದೆ
ಮುಂದಿನ ಚುನಾವಣೆಯಲ್ಲಿ ಜನರು ನಮ್ಮ ಪಕ್ಷಕ್ಕೆ ಸಂಪೂರ್ಣ ಸಹಕಾರ ಕೊಡುತ್ತಾರೆ ಎಂಬ ಭರವಸೆ ತಮಗಿದೆ ಎಂದು ಮಾಜಿ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

Leave a Comment