ಮೋದೂರು ಕೆರೆಗೆ ನೀರು ತುಂಬಿಸಲು ಆಗ್ರಹ

ಕೆ.ಆರ್.ಪೇಟೆ. ಸೆ.11: ಹೇಮಾವತಿ ನಾಲೆಯಿಂದ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ತಾಲೂಕಿನ ಮೋದೂರು ಗ್ರಾಮಸ್ಥರು ಹೇಮಾವತಿ ನೀರಾವರಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.
ಕಳೆದ ಒಂದೂವರೆ ತಿಂಗಳಿನಿಂದ ಗೊರೂರು ಹೇಮಾವತಿ ಜಲಾಶಯದಿಂದ ನದಿಯ ಮೂಲಕ ಸಾವಿರಾರು ಕ್ಯೂಸೆಕ್ಸ್ ನೀರು ತಮಿಳುನಾಡು ಪಾಲಾಗುತ್ತಿದೆ ಆದರೂ ಸಹ ಹೇಮಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಕೆಆರ್ ಪೇಟೆ ತಾಲೂಕಿನ ಗ್ರಾಮದ ಕೆರೆಗೆ ನೀರು ತುಂಬಿಸದೇ ಇರುವ ನೀರಾವರಿ ಅಧಿಕಾರಿಗಳು ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.
ತಾಲೂಕಿನಲ್ಲಿ ಮಳೆಯಿಲ್ಲದೆ ಬರಗಾಲ ತಾಂಡವವಾಡುತ್ತಿದೆ. ಕೆರೆಕಟ್ಟೆಗಳು ಬತ್ತಿಹೋಗಿರುವ ಕಾರಣ ಕುಡಿಯುವ ನೀರಿನ ಹಾಗೂ ಕೃಷಿ ಕೊಳವೆಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಮೋದೂರು ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ ಇದರಿಂದಾಗಿ ಗ್ರಾಮದ ಸುತ್ತಮುತ್ತಲ ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಹಾಗಾಗಿ ಕೂಡಲೇ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಅಧಿಕಾರಿಗಳು ಮೋದೂರು ಗ್ರಾಮದ ಕೆರೆಗೆ ಕೂಡಲೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಹೇಮಾವತಿ ಕಚೇರಿಗೆ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮೋದೂರು ಗ್ರಾಮಸ್ಥರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೇಶ್, ದೇವರಾಜು, ಮೊಗಣ್ಣ, ನಾಗರಾಜು ರಾಮಚಂದ್ರು, ಶ್ರೀಧರ್ ಯೋಗೇಶ್ ದೇವರಾಜು ಮೊಗಣ್ಣ, ವೀರಭದ್ರ, ರಾಜಪ್ಪ, ಪಟೇಲ್ ನಾಗರಾಜಪ್ಪ, ಹೊಸೂರು ಸೋಮಣ್ಣ, ಬಸಪ್ಪ ಶಿವಪ್ಪ, ಶಿವಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment