ಮೋದಿ ಯೋಜನೆ ಲಾಭ ಶ್ರೀಮಂತರ ಪಾಲು : ರಾಹುಲ್ ವಾಗ್ದಾಳಿ

ನವದೆಹಲಿ, ಸೆ. ೧೦- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ದೇಶದ 15 ರಿಂದ 20 ಮಂದಿಗಷ್ಟೇ ದೊರೆಯುತ್ತಿದ್ದು, ಈ ಮೂಲಕ ಬಡ, ಮಧ್ಯಮ ಮತ್ತು ಯುವಜನರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೈತರು, ಬಡವರು, ಮಹಿಳೆಯರ ಪರ ಎನ್ನುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೆಲವೇ ಕೆಲವು ಉದ್ಯಮಿಗಳ ಬೆನ್ನಿಗೆ ನಿಂತಿದ್ದು, ಉನ್ನುಳಿದ ದೇಶದ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ದೂರಿದರು.

ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ವಿರೋಧಿಸಿ ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ರಾಜ್ ಘಾಟ್‌ನಿಂದ ರಾಮ್ ಲೀಲಾ ಮೈದಾನದವರೆಗೆ ಪಾದಯಾತ್ರೆ ನಡೆಸಿ ಬಳಿಕ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಬಡಜನರು, ಯುವಜನತೆ ಹಾಗೂ ಮಹಿಳೆಯರನ್ನು ಕತ್ತಲೆಗೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿನೇದಿನೇ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದೆ. ಆದರೆ ಇದರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದ್ದಾರೆ. ಎನ್.ಡಿ.ಎ. ಸರ್ಕಾರ ಕೆಲವೇ ಕೆಲವು ಉದ್ಯಮಿಗಳ ಪರವಾಗಿದೆ ಎಂದು ದೂರಿದರು.

ದೇಶದ ಸಣ್ಣ ಉದ್ಯಮಿಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ರಫೆಲ್ ಒಪ್ಪಂದ ಕೆಲವೇ ಕೆಲವು ಉದ್ಯಮಿಗಳಿಗೆ ಲಾಭ ಮಾಡಿಕೊಡುತ್ತಿದೆ. ಹೀಗಿದ್ದರೂ ನಾವು ಬಡಜನರ ಪರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ದೂರಿದರು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ನಿರುದ್ಯೋಗ ಸಮಸ್ಯೆ, ಬಡತನ ತಾಂಡವವಾಡುತ್ತಿದೆ. ಇದರ ನಿಯಂತ್ರಣಕ್ಕೆ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ಒಟ್ಟುಗೂಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಮನವಿ ಮಾಡಿದರು.

21 ಪಕ್ಷಗಳ ಬೆಂಬಲ

ತೈಲ ಬೆಲೆ ಏರಿಕೆ ವಿರೋಧಿಸಿ, ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‌ಗೆ ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್, ಲೋಕ ತಾಂತ್ರಿಕ ಜನತಾ ದಳದ ಅಧ್ಯಕ್ಷ ಶರದ್ ಯಾದವ್ ಸೇರಿದಂತೆ, ಅನೇಕ ಪಕ್ಷಗಳ ಮುಖಂಡರು ಬೆಂಬಲ ಘೋಷಿಸಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಮ್ ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಅಶೋಕ್ ಗೆಲ್ಹೋಟ್ ಸೇರಿದಂತೆ, ಕಾಂಗ್ರೆಸ್‌ನ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಬಾಲಕಿ ಸಾವು

ಬಿಹಾರದ ಜನಹಾಬಾದ್‌ನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು ಪೋಷಕರು ತೀವ್ರ ಹೆಣಗಾಟ ನಡೆಸಿದರು. ಅಂಗಲಾಚಿದರೂ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರು ಜಾಗಬಿಡದ ಹಿನ್ನೆಲೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾರೆ.

ರಾಹುಲ್‌ಗೆ ಬಿಜೆಪಿ ಪ್ರಶ್ನೆ

ಬಂದ್ ಆಚರಿಸುವ ವೇಳೆ ಬಿಹಾರದಲ್ಲಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ನೀಡುವಂತೆ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದೆ.

ಅನಾರೋಗ್ಯಪೀಡಿತ ಬಾಲಕಿಗೆ ಆಸ್ಪತ್ರೆಗೆ ಹೋಗಲು ದಾರಿ ಮಾಡಿಕೊಡದೆ ಬಾಲಕಿಯ ಸಾವಿಗೆ ಕಾರಣರಾಗಿರುವ ಪ್ರತಿಭಟನಾಕಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅಮಾನವೀಯತೆ ಮೆರೆದ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ರವಿಶಂಕರ್ ಅವರು ಒತ್ತಾಯಿಸಿದ್ದಾರೆ.

ಕೋಲ್ಕತ್ತಾದಲ್ಲಿ ಬಂದ್ ಯಶಸ್ವಿ

ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕರೆ ನೀಡಿದ್ದ ಭಾರತ್ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಅದೇ ರೀತಿ ಪಂಜಾಬ್, ದೆಹಲಿ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

Leave a Comment