ಮೋದಿ ಪ್ರೋಗ್ರೆಸ್ ರಿಪೋರ್ಟ್ ಶೂನ್ಯ

ದಾವಣಗೆರೆ.ಮಾ.15; ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯೇ ನಡುಗುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಮೋದಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಗೇಲಿಯ ವಸ್ತುವಾಗಿದೆ. ಮೋದಿ ಆಡಳಿತವನ್ನು ಪ್ರಶ್ನಿಸುವವರಿಗೆಲ್ಲಾ ದೇಶದ್ರೋಹಿಗಳ ಪಟ್ಟ ನೀಡಲಾಗುತ್ತಿದೆ. ಸಂವಿಧಾನಿಕ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ರಾಜಕೀಯ ವಿರೋಧಿಗಳನ್ನು ಹಣಿಯಲಾಗುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ತನ್ನೆಲ್ಲಾ ಸ್ವಯಂಕೃತ ವೈಪಲ್ಯಗಳನ್ನು ಮುಚ್ಚಿ ಹಾಕುವ ಜೊತೆಯಲ್ಲಿ ಸಂಘ ಪರಿವಾರದ ಅಜೆಂಡವನ್ನು ಕಾರ್ಯರೂಪಕ್ಕೆ ತರುವ ಹುನ್ನಾರವನ್ನು ಅವರು ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮೋದಿಯವರನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಿದೆ. ಬ್ರಿಟಿಷರಿಗಿಂತಲೂ ಕೆಟ್ಟ ಆಡಳಿತ ಮೋದಿ ನೀಡುತ್ತಿದ್ದಾರೆ. ಕಳೆದ 5 ವರ್ಷದ ಆಡಳಿತದಲ್ಲಿ ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿದರು.

ಮಹಾನ್ ವಂಚನೆ; ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕರ್ನಾಟಕದ ಹೆಚ್‍ಎಎಲ್ ನ್ನು ಕಡೆಗಣಿಸಿ ಅನಿಲ್ ಅಂಬಾನಿಗೆ ಆದ್ಯತೆ, ಗಂಗಾಸ್ವಚ್ಚ ಯೋಜನೆಯಲ್ಲಿ 2 ಸಾವಿರ ಕೋಟಿ, ಒಎನ್‍ಜಿ.ಸಿಯಲ್ಲಿ 16 ಸಾವಿರ ಕೋಟಿ, ಗುಜರಾತ್‍ನ ಜಿ.ಎಸ್.ಪಿ.ಸಿಯಲ್ಲಿ 20 ಸಾವಿರ ಕೋಟಿ ದಾನ್ಯ ಖರೀದಿ ಪ್ರಕ್ರಿಯೆಯಲ್ಲಿ 2.50 ಲಕ್ಷ ಕೋಟಿ, ಗುಜರಾತ್ ಸೋಲಾರ್ ಯೋಜನೆಯ ಹೆಸರಲ್ಲಿ 2,200 ಕೋಟಿ, ಅಮಿತ್‍ಷಾರವರ ರಾಜ್‍ಕೋಟ್ ಜಿಲ್ಲಾ ಬ್ಯಾಂಕ್ ಹಗರಣ, 7000 ಸಾವಿರ ಕೋಟಿ, ಪ್ರಧಾನಿ ಮೋದಿಯವರ ಅತ್ಯಾಪ್ತರಾದ ಆದಾನಿಯವರ 1.92 ಲಕ್ಷ ಕೋಟಿ, ಮೆಹೂಲ್ ಚೋಕ್ಷಿಯವರ 13 ಸಾವಿರ ಕೋಟಿ, ನೀರವ್ ಮೋದಿಯವರ 21 ಸಾವಿರ ಕೋಟಿ, ವಿಜಯಮಲ್ಯ ಅವರ 9 ಸಾವಿರ ಕೋಟಿ, ಅನಾರ್ ಪಟೇಲ್ ಅವರ ಜಮೀನು ಹಗರಣದಲ್ಲಿ 16 ಸಾವಿರ ಕೋಟಿ, ಜಯಷಾ ಅವರ 800 ಕೋಟಿ ವಂಚನೆಯ ಪ್ರಕರಣಗಳು ಜೊತೆಗೆ ಇನ್ನೂ ಹಲವಾರು ಹಗರಣಗಳು ಈ ದೇಶಕ್ಕೆ ಮೊದಿಯವರು ಕೊಟ್ಟ ಅತೀ ದೊಡ್ಡ ಕೊಡುಗೆಗಳಾಗಿವೆ. ವಿದೇಶಗಳಲ್ಲಿ ಬಚ್ಚಿಟ್ಟಿರುವ ಎಲ್ಲಾ ಕಪ್ಪು ಹಣವನ್ನು ನಾನು ವಾಪಸ್ ತರುತ್ತೇವೆ, ಎಲ್ಲಾ ಭ್ರಷ್ಟರನ್ನು ಹಿಡಿದು ಜೈಲಿಗೆ ಅಟ್ಟುತ್ತೇವೆ. ಭಾರತದ ಪ್ರತಿ ನಾಗರೀಕರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂಪಾಯಿಗಳು ಡೆಪಾಸಿಟ್ ಮಾಡುತ್ತೇವೆಂದು ಅಧಿಕಾರಕ್ಕೇರಿದ ಮೋದಿಯವರು ತಮ್ಮ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದರೂ, 15 ಲಕ್ಷವಿರಲಿ, ಯಾರೊಬ್ಬರಿಗೂ ಕೇವಲ 15 ರೂಪಾಯಿಗಳನ್ನು ನೀಡಲಿಲ್ಲ.

ಸಂವಿಧಾನಿಕ ಸಂಸ್ಥೆಗಳ ದುರುಪಯೋಗ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗ, ಕೇಂದ್ರ ಜಾಗೃತಿ ದಳ, ಆದಾಯ ತೆರಿಗೆ ಇಲಾಖೆಗಳನ್ನು ಹಲವಾರು ಬಾರಿ ದುರುಪಯೋಗ ಮಾಡಿಕೊಂಡು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದೆ. ಇದರಲ್ಲಿ ಬಹುಮುಖ್ಯವಾಗಿ ಕೇಂದ್ರಿಯ ತನಿಖಾದಳ ಸಿಬಿಐನ ನಿರ್ದೇಶಕರನ್ನು ತಮ್ಮ ಮೇಲೆ ರಫೇಲ್ ಹಗರಣದ ತನಿಖೆ ನಡೆಸಬಾರದೆಂದು ಬಲವಂತವಾಗಿ ರಜೆಯಲ್ಲಿ ಕಳುಹಿಸಿ ಸುಪ್ರೀಂ ಕೋರ್ಟಿನಲ್ಲಿ ಮುಖಭಂಗ ಅನುಭವಿಸಿತ್ತು.
ಬಹಿರಂಗ ಬಂಡಾಯ : ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯದ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿತು.

ಗಂಗಾರ್ಪಣೆ : ದೇವನದಿ ಗಂಗೆಯನ್ನು ಸ್ವಚ್ಚಗೊಳಿಸಲೆಂದು 20 ಸಾವಿರ ಕೋಟಿ ರೂಗಳನ್ನು ತೆಗೆದಿಟ್ಟ ಕೇಂದ್ರ ಸರ್ಕಾರ ಎರಡು ವರ್ಷದಲ್ಲಿ 7 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂಬ ಹೇಳಿಕೆ ನೀಡಿದೆ. ಈ ಸಂಬಂಧ ಆದೇಶ ನೀಡಿರುವ ಹಸಿರು ನ್ಯಾಯಾಧಿಕರಣ, ಗಂಗೆಯ ಸ್ವಚ್ಚತೆಯೇ ನಡೆದಿಲ್ಲ ಇಷ್ಟೊಂದು ಪ್ರಮಾಣದ ಹಣ ವೆಚ್ಚವಾಯಿತು ಎಂಬ ಸಂಶಯ ವ್ಯಕ್ತಪಡಿಸಿದೆ.
ಪ್ರಧಾನಮಂತ್ರಿ ತಮ್ಮ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ದೇಶಕ್ಕೆ ನೀಡಿದ ಅಭಿವೃದ್ಧಿ ಕಾರ್ಯಗಳನ್ನು, ನೀಡಿದ ಭರವಸೆಗಳನ್ನು ಜಾರಿಮಾಡಿದ ಬಗ್ಗೆ ಮಾಹಿತಿ ನೀಡದೇ ಅವರ ಸಾಧನೆ ಶೂನ್ಯವಾಗಿರುವ ಕಾರಣ ಅವರ ಪ್ರೋಗ್ರೆಸ್ ರಿಪೋರ್ಟ್ ಜನರ ಮುಂದೆ ಇಡದೇ ದೇಶಕ್ಕಾಗಿ ಜೀವದ ಹಂಗುತೊರೆದು ಹೋರಾಟ ಮಾಡಿದ ಯೋಧರನ್ನು ಮುಂದಿಟ್ಟುಕೊಂಡು ಮತಕೇಳಲು ಹೊರಟಿದ್ದಾರೆಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ ಚಂದ್ರಪ್ಪ,ಲಿಯಾಖತ್ ಅಲಿ,ಬಿ.ಹೆಚ್ ಉದಯ್ ಕುಮಾರ್,ಅಬ್ದುಲ್ ಜಬ್ಬಾರ್, ಡಿ.ಶಿವಕುಮಾರ್ ಶಿವಪ್ರಕಾಶ್,ಬಸವರಾಜ್ ಇದ್ದರು.

Leave a Comment