ಮೋದಿ ನೀತಿ : ದೇಶದ ಆರ್ಥಿಕತೆ ಕುಸಿತ

ನ.13 : ರಾಜ್ಯ-ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
ರಾಯಚೂರು.ನ.10- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೊಸ ನೀತಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಐಸಿಸಿ ಸೂಚನೆ ಮೇರೆಗೆ ಎಲ್ಲಾ ರಾಜ್ಯಗಳು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ನ.13 ರಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳಿಂದ ದೇಶದಲ್ಲಿ ಯುವಕರು, ರೈತರು, ಕಾರ್ಮಿಕರು, ಉತ್ಪನ್ನ ಕಂಪನಿಗಳ ಆರ್ಥಿಕ ಪರಿಸ್ಥಿತಿ ಹದಗೆಡುವ ಮೂಲಕ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆಂದು ತಿಳಿಸಿದರು.
ಮೋದಿ ಸರ್ಕಾರ ಅವಧಿಯಲ್ಲಿ ರೈತರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. ಪ್ರತಿಷ್ಠಿತ ಕಂಪನಿಗಳಾದ ಬ್ರಿಟಾನಿಯಾ ಹಾಗೂ ಪಾರ್ಲಿ ಜೀ ಸೇರಿದಂತೆ ಇನ್ನಿತರ ಕಂಪನಿಗಳು ಮುಚ್ಚುವ ಪರಿಸ್ಥಿತಿ ಒದಗಿ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2014 ರಿಂದ 2019 ರವರೆಗೆ ಹೂಡಿಕೆ ಮಾಡಲಾದ 3 ಲಕ್ಷ 89 ಸಾವಿರ ಕೋಟಿ ಹಣವನ್ನು ಬೇರೆಕಡೆ ವರ್ಗಾಯಿಸಲಾಗಿದೆ. ಆರ್‌ಬಿಐ ಜೊತೆ ಚರ್ಚಿಸದೆ, ನೋಟು ಅಮಾನ್ಯೀಕರಣ ಮಾಡಲಾಯಿತೆಂದರು.
ದೇಶದ ಜನರ ಅಭಿವೃದ್ಧಿಗಾಗಿ ಕಪ್ಪು ಹಣ ತರುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಮಧ್ಯಮ ವರ್ಗ, ಸಣ್ಣ ವ್ಯಾಪಾರಿಗಳು ಹಾಗೂ ಸ್ಥಳೀಯ ಕೈಗಾರಿಕೆಗಳನ್ನು ಕಡೆಗಣಿಸುವ ಮೂಲಕ ಜಿಎಸ್ಟಿ ಜಾರಿಗೆ ತರಲಾಯಿತು. ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆಂದು ಆರ್ಥಿಕ ತಜ್ಞರು ಹೇಳಿದರೂ, ಅವರ ಮಾತಿಗೆ ಮನ್ನಣೆ ನೀಡದೆ, ನಿರ್ಲಕ್ಷ್ಯೆ ತೋರುತ್ತಿದ್ದಾರೆಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು 17 ಶಾಸಕರು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ 100 ದಿನ ಪೂರೈಸಿದ ಸರ್ಕಾರವಾಗಿದೆ. ರಾಜ್ಯದ ನೆರೆ ಮತ್ತು ಬರ ಪರಿಹಾರ ಒದಗಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯೆ ವಹಿಸಿದ್ದಾರೆ. ರಾಜ್ಯದಲ್ಲಿ ನೆರೆಯಿಂದ 32 ಸಾವಿರ ಕೋಟಿ ನಷ್ಟವಾಗಿದೆಂದು ರಾಜ್ಯ ಸರ್ಕಾರ ವರದಿ ನೀಡಿದೆ. ಕೇಂದ್ರ ಸರ್ಕಾರ 1200 ಕೋಟಿ ಪರಿಹಾರ ನೀಡುವ ಮೂಲಕ ಕೈತೊಳೆದುಕೊಂಡಿದೆ.
ಪರಿಹಾರ ಒದಗಿಸುವಲ್ಲಿ ಮೋದಿ ಸರ್ಕಾರವೂ ದ್ವೇಷದ ರಾಜಕಾರಣ ಮಾಡುತ್ತಿದೆಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕೂಡಲೇ ಐಸಿಸಿ ಸಭೆ ಕರೆಯುವಂತೆ ಆಗ್ರಹಿಸಲಾಗಿದೆ. ತುಂಗಭದ್ರಾ ಹಾಗೂ ನಾರಾಯಣಪೂರ ಜಲಾಶಯ ಭಾಗದ ಎರಡನೇ ಬೆಳೆಗೆ ನೀರು ಒದಗಿಸುವ ಕುರಿತು ರೈತರಿಗೆ ಮಾಹಿತಿ ನೀಡಲು ಮುಖ್ಯವಾಗಿದೆಂದು ತಿಳಿಸಿದರು.
ಮುಂದಿನ ವರ್ಷ ರಾಯಚೂರು ವಿಶ್ವವಿದ್ಯಾಲಯ ಪ್ರಾರಂಭಿಸುವಂತೆ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸಿ, ವಿಶ್ವವಿದ್ಯಾಲಯಕ್ಕೆ ಒಪ್ಪಿಗೆ ಪಡೆಯಬೇಕೆಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿ, ಒತ್ತಾಯಿಸಲಾಗಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಶಾಸಕ ದದ್ದಲ ಬಸವನಗೌಡ, ಮಾಜಿ ಸಂಸದ ಬಿ.ವಿ.ನಾಯಕ, ಪಾರಸಮಲ್ ಸುಖಾಣಿ, ನಗರಸಭೆ ಸದಸ್ಯ ಜಯಣ್ಣ, ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಅಬ್ದುಲ್ ಕರೀಂ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment