ಮೋದಿ ಕಪ್ಪುಪೆಟ್ಟಿಗೆ ತನಿಖೆಗೆ ಕೆಪಿಸಿಸಿ ಆಗ್ರಹ

ಬೆಂಗಳೂರು.ಏ 15. ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಮಾವೇಶ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಂದ ಕಾರಿನಲ್ಲಿ ಸಾಗಿಸಲಾದ ‘ಕಪ್ಪು ಪೆಟ್ಟಿಗೆ’  ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೆಪಿಸಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇತ್ತೀಚೆಗೆ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳಲ್ಲಿದ್ದ ಕೋಟ್ಯಂತರ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದು, ಇದರಿಂದ ಮೋದಿ ತಾವು ಹೋದಲೆಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಹಣ ತಲುಪಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಚಿತ್ರದುರ್ಗದಲ್ಲಿ ಮೋದಿ ಅವರ ಕಾರಿನಲ್ಲಿ ಸಾಗಿಸಲಾದ ಕಪ್ಪು ಪೆಟ್ಟಿಗೆ ಇಂತಹುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ಆಯೋಗಕ್ಕೆ ಬರೆದ ದೂರು ಪತ್ರದಲ್ಲಿ ತಿಳಿಸಿದೆ.

ಕೆಪಿಸಿಸಿ  ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಲ್ಮನೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಥೋಡ್, ಸಂಶಯಾಸ್ಪದ ಕಪ್ಪು ಪೆಟ್ಟಿಗೆಯಲ್ಲಿ ಏನಿತ್ತು ಎಂಬುದರ ಬಗ್ಗೆ ಆಯೋಗ ತನಿಖೆ  ನಡೆಸಬೇಕು. ಪ್ರಧಾನಿ ನರೇಂದ್ರ ಮೋದಿ ಶುದ್ಧಹಸ್ತರು ಎನ್ನುವುದಾದರೆ ನಿಷ್ಪಕ್ಷವಾಗಿ  ತನಿಖೆ ಎದುರಿಸಬೇಕು ಹಾಗೂ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ನರೇಂದ್ರ ಮೋದಿ ಅವರು  ವಿಶೇಷ ರಕ್ಷಣಾ ದಳದ ಜೊತೆ ಸಂಚರಿಸುತ್ತಿದ್ದು, ಯಾರೊಬ್ಬರೂ ಸಹ ಅವರ ವಾಹನವನ್ನು ತಪಾಸಣೆ  ನಡೆಸಿಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರ  ವಾಹನಗಳನ್ನು ತಪಾಸಣೆ ನಡೆಸುವ ಚುನಾವಣಾ ಆಯೋಗ, ಮೋದಿ ಅವರ ವಾಹನವನ್ನೇಕೆ ತಪಾಸಣೆ  ನಡೆಸಲಿಲ್ಲ. ಚುನಾವಣಾಧಿಕಾರಿಗಳು ನಿಷ್ಪಕ್ಷಪಾತವಾಗಿ ತಪಾಸಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿಗೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಹತಾಶರಾಗಿರುವ ಬಿಜೆಪಿ ನಾಯಕರಾದ ಸಿ.ಟಿ.ರವಿ, ಈಶ್ವರಪ್ಪ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ರಾಷ್ಟ್ರೀಯ ನಾಯಕರು ಸಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಎಐಸಿಸಿ ಬಿಡುಗಡೆಗೊಳಿಸಿರುವ ಜನಪರ ಪ್ರಣಾಳಿಕೆ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ನಾಯಕರು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಳ್ಲಬೇಕು ಎಂದು ರಾಥೋಡ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೀಳುಮಟ್ಟದ ರಾಜಕಾರಣಕ್ಕೆ ಕೈ ಹಾಕಿರುವ ಬಿಜೆಪಿ ನಾಯಕರು ವಿದ್ಯುನ್ಮಾನ ಮತಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ವಿರೋಧ ಪಕ್ಷಗಳಿಗೆ ಇವಿಎಂ ಯಂತ್ರದಲ್ಲಿ ನಂಬಿಕೆ ಇಲ್ಲ. ಹೀಗಾಗಿ ಚಂದ್ರಬಾಬು ನಾಯುಡು ಸೇರಿದಂತೆ ಹಲವು ಪ್ರಾದೇಶಿಕ ನಾಯಕರು ಇವಿಎಂ ಯಂತ್ರದ ಬದಲು ಕಾಗದ ಮತಪತ್ರ ಬಳಕೆಗೆ ಆಯೋಗವನ್ನು ಒತ್ತಾಯಿಸಿದ್ದಾರೆ ಎಂದರು.

ಅರುಣಾಚಲ ಪ್ರದೇಶದಲ್ಲಿ ಜಪ್ತಿಯಾದ ಹಣದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಕಳೆದ ಭಾನುವಾರ ಎಐಸಿಸಿ ವಕ್ತಾರ ಆನಂದ್ ಶರ್ಮಾ ಕೇಂದ್ರ ಚುನಾವಣಾ ಆಯೋಗಕ್ಕೆ ದೂರಿದ್ದರು. ಏ. 9 ರಂದು ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಭಾಗವಹಿಸಿದ್ದು,  ಈ ಸಂದರ್ಭದಲ್ಲಿ ಅವರು ಆಗಮಿಸಿದ್ದ ಹೆಲಿಕಾಪ್ಟರ್ ನಿಂದ ಕಪ್ಪುಬಣ್ಣದ ಪೆಟ್ಟಿಗೆವೊಂದನ್ನು ಪ್ರಧಾನಿ ಭದ್ರತಾ ವಾಹನವಲ್ಲದ ಇನೋವಾ ಕಾರಿಗೆ ಸಾಗಿಸಲಾಗಿತ್ತು. ಈ ಸಂಬಂಧ ಇದೀಗ ರಾಜ್ಯ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರಿದೆ.

Leave a Comment