ಮೋದಿಯಿಂದ ನೆಹರು ಪರಂಪರೆ ಅಳಿಸುವ ಯತ್ನ

ನವದೆಹಲಿ, ಆ. ೨೭- ನೆಹರು ಪರಂಪರೆಯನ್ನು ಅಳಿಸಿಹಾಕುವ ಯತ್ನ ಮೋದಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯ ತೀನ್ ಮೂರ್ತಿ ಭವನ್ ಸಂಕೀರ್ಣ ಮತ್ತು ನೆಹರೂ ಸ್ಮಾರಕ ಮ್ಯೂಸಿಯಂನ ಸ್ವರೂಪ ಹಾಗೂ ಲಕ್ಷಣವನ್ನೇ ಬದಲಾಯಿಸಲು ಮೋದಿ ಸರ್ಕಾರ ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದ ಮನಮೋಹನ್ ಸಿಂಗ್ ‘ನೆಹರು ಕೇವಲ ಕಾಂಗ್ರೆಸ್‌ಗೆ ಸೇರಿದವರಲ್ಲ, ಅವರು ಇಡೀ ದೇಶದ ಆಸ್ತಿ, ಆದ್ದರಿಂದ ತೀನ್ ಮೂರ್ತಿ ಭವನಕ್ಕೆ ಯಾವುದೇ ರೀತಿಯಲ್ಲಿ ಅಪಚಾರವಾಗಬಾರದು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ತೀನ್ ಮೂರ್ತಿ ಭವನದ ಸಂಕೀರ್ಣದಲ್ಲಿ ಎಲ್ಲಾ ಪ್ರಧಾನಿಗಳ ಮ್ಯೂಸಿಯಂ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಈಗ ಭಾರೀ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರ ಈ ಪತ್ರ ಮಹತ್ವ ಪಡೆದುಕೊಂಡಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು, ನೆಹರು ಬಗ್ಗೆ ಮತ್ತು ತೀನ್ ಮೂರ್ತಿ ಭವನದ ಬಗ್ಗೆ ಅತ್ಯಂತ ಗೌರವಭಾವ ಹೊಂದಿದ್ದರು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Leave a Comment