‘ಮೋದಿಯಿಂದ ಕೌಶಲ ಅಭಿವೃದ್ದಿಗೆ ಆದ್ಯತೆ’

ಮಂಗಳೂರು, ಮೇ ೧೯- ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೌಶಲ ಅಭಿವೃದ್ಧಿ ತರಬೇತಿಯಲ್ಲಿಯೂ ದೇಶದಲ್ಲಿ ೬೦ ವರ್ಷಗಳಿಂದ ಇದ್ದ ಶಿಕ್ಷಣ ಪದ್ದತಿಗೆ ಬದಲಾವಣೆ ತರಲಾಗಿದೆ. ಐಟಿಐ ಕೋರ್ಸ್‌ಗಳನ್ನು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಕ್ಕೆ ಸಮಾನಾಂತರವಾಗಿ ರೂಪಿಸಲಾಗಿದೆ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದರು.

ನಿನ್ನೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟಾರ್ಟ್ ಆಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರದ ಈ ನಿರ್ಧಾರದಿಂದಾಗಿ ೨.೩ ಮಿಲಿಯನ್ ವಿದ್ಯಾರ್ಥಿಗಳು ಐಟಿಐಗೆ ಸೇರ್ಪಡೆಯಾಗಿದ್ದಾರೆ. ಸಹ್ಯಾದ್ರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಐಟಿಐ ಮತ್ತು ಎನ್‌ಐಟಿಗಳಿಗೆ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಸ್ಪರ್ಧೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಉದ್ಯಮ ಶೀಲತೆ ಮೈಗೂಡಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳ ಮೂಲಕ ಐಟಿಐ ಮತ್ತು ಎನ್‌ಐಟಿ ವಿದ್ಯಾರ್ಥಿಗಳ ಜತೆ ಸ್ಪರ್ಧೆ ನಡೆಸಿ, ಬಹುಮಾನ ಗಳಿಸಿದ್ದಾರೆ. ಆ ಮೂಲಕ ಐಟಿಐ-ಎನ್‌ಐಟಿ ವಿದ್ಯಾರ್ಥಿಗಳು ಕಾಲೇಜನ್ನು ಗಮನಿಸುವಂತಾಗಿದೆ ಎಂದರು. ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಯು.ಎಂ.ಭೂಷಿ, ನಿರ್ದೇಶಕ ಡಾ. ಪ್ರಭಾಕರ ಉಪಸ್ಥಿತರಿದ್ದರು. ಇದೇ ವೇಳೆ ಕಾಲೇಜಿನ ಮೆಕ್‌ಟಿಕ್ ಗ್ಯಾರೇಜ್ ಉದ್ಘಾಟಿಸಲಾಯಿತು.

Leave a Comment