ಮೋಟೆಬೆನ್ನೂರ ಅಭಿವೃದ್ಧಿಗೆ 2.5 ಕೋಟಿ ಮಂಜೂರು

ಬ್ಯಾಡಗಿ, ನ 11- ಮೋಟೆಬೆನ್ನೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ 2.5 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಅವರು ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜಿನ ಮೊದಲ ಮಹಡಿ ಕಟ್ಟಡ ಕಾಮಗಾರಿ, 35 ಲಕ್ಷ ರೂ.ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಓಣಿಯಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣ, 25 ಲಕ್ಷ ರೂ.ಗಳ ವೆಚ್ಚದಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಈ ಗ್ರಾಮಕ್ಕೆ 50 ಲಕ್ಷ ರೂ. ಗಳ ವೆಚ್ಚದಲ್ಲಿ ಶಾಲಾ ಕಟ್ಟಡ ಹಾಗೂ ಕಾಂಕ್ರಿಟ್ ರಸ್ತೆ ಮತ್ತು ಪಕ್ಕಾ ಗಟಾರಗಳನ್ನು ನಿರ್ಮಿಸಲಾಗಿದೆ. ಇನ್ನೂ ಈ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸುವುದಾಗಿ ತಿಳಿಸಿದರು.
ಪಿಕಾರ್ಡ ಬ್ಯಾಂಕ್ ನಿರ್ಧೇಶಕ ಸುರೇಶ ಯತ್ನಳ್ಳಿ ಮಾತನಾಡಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರಕ್ಕೆ ಕೋಟ್ಯಾಂತರ ರೂ.ಗಳ ಅನುದಾನವನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ಕಂಕಣ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವೆಂದು ಹೇಳಿದರು.
ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ನೀಲವ್ವ ಬ್ಯಾಟೆಪ್ಪನವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಅನಸೂಯಾ ಕುಳೇನೂರ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಗದೀಶ, ಎಪಿಎಂಸಿ ಸದಸ್ಯೆ ವನಿತಾ ಗುತ್ತಲ, ಗ್ರಾ.ಪಂ.ಉಪಾಧ್ಯಕ್ಷ ಮುದಕಪ್ಪ ಕಪ್ಪಾರಿ, ಸದಸ್ಯರಾದ ನಾಗರಾಜ ಹಾವನೂರ, ಶಿವಾನಂದ ಕಟ್ಟಿಮನಿ, ನಿಂಬಮ್ಮ, ಯಲ್ಲನಗೌಡ್ರ ಪಾಟೀಲ, ಶಿವಪುತ್ರಪ್ಪ ಅಗಡಿ, ವಿಜಯಭರತ್ ಬಳ್ಳಾರಿ, ವಿರೇಂದ್ರ ಹಿತ್ತಲಮನಿ, ಬಸಣ್ಣ ದಿಡಗೂರ, ಚನವೀರಪ್ಪ ಬಳ್ಳಾರಿ, ನಾಗರಾಜ ಆನ್ವೇರಿ, ಹನುಮಂತಪ್ಪ ಬ್ಯಾಟೆಪ್ಪನವರ, ಗುತ್ತಿಗೆದಾರರಾದ ವಿಕ್ರಂ ಬಳ್ಳಾರಿ, ಬಸೀರ್‍ಅಹ್ಮದ ತಳಗೇರಿ, ಇಂಜನೀಯರರಾದ ಕೆ.ರಾಜಪ್ಪ, ಎ.ಎಸ್.ಪಾಟೀಲ, ಶಿವಮೂರ್ತಿ, ರಾಮದಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Comment