‘ಮೋಟಾರು ವಾಹನ ಮಸೂದೆ ವಾಪಾಸು ಪಡೆಯಲು ಒತ್ತಾಯ’

ಮಂಗಳೂರು, ಆ.೮- ಸಾರಿಗೆ ರಂಗದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಜೀವನಾಧಾರಗಳನ್ನು ರಕ್ಷಿಸಲು, ಸಾರಿಗೆ ರಂಗವನ್ನು ಭಾರತೀಯರ ಪರವಾಗಿ ಉಳಿಸಲು ಹಾಗೂ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯಿದೆ ಜಾರಿಗೊಳಿಸುವ ಸಲುವಾಗಿ ಮೋಟಾರು ವಾಹನ (ತಿದ್ದುಪಡಿ) ಮಸೂದೆ ೨೦೧೭ನ್ನು ಕೇಂದ್ರ ಸರಕಾರ ಕೈಬಿಡಬೇಕೆಂದು ಒತ್ತಾಯಿಸಿ ನಿನ್ನೆ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದು, ಅದರ ಭಾಗವಾಗಿ ಸಿಐಟಿಯು ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಲಾಯಿತು.
ಈ ಮಸೂದೆಯಿಂದಾಗಿ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯಗಳ ಅಧಿಕಾರ ಮೊಟಕಾಗಲಿದೆ. ಪ್ರಸ್ತುತ ಈ ಮಸೂದೆಯು ಭಾರತ ಸಂವಿಧಾನದ ಮೂಲ ಸ್ಥಂಭವಾದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಮಸೂದೆ ಅಂಗೀಕಾರವಾದಲ್ಲಿ ರಾಜ್ಯಗಳ ಕಾನೂನು ರೂಪಿಸುವ ಹಕ್ಕುಗಳು ನಾಶವಾಗಲಿವೆ. ಏಕ ಗವಾಕ್ಷಿ, ಏಕ ತೆರಿಗೆ ಮತ್ತು ನಿಯಂತ್ರಣ ಪ್ರಾಧಿಕಾರ ಮುಂತಾದ ಹೆಸರಿನಲ್ಲಿ ಎಲ್ಲವನ್ನೂ ಕೇಂದ್ರ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ರಾಜ್ಯ ಸರ್ಕಾರಗಳ ಆದಾಯ ತೀವ್ರವಾಗಿ ಕಡಿಮೆಯಾಗಲಿದೆ. ಮಸೂದೆ ಜಾರಿಯಾದಲ್ಲಿ ವಾಹನಗಳನ್ನು “ರೀಕಾಲ್” ಮಾಡುವ ಹೊಸ ಅಧಿಕಾರ ಕೇಂದ್ರ ಸರ್ಕಾರಕ್ಕೆ ಬರಲಿದೆ. ಈ ಮಸೂದೆಯ ಪ್ರಕಾರ ಅಪಘಾತಗಳಿಗೆ ಚಾಲಕರು ಮತ್ತು ನಿರ್ವಾಹಕರನ್ನೇ ಹೊಣೆ ಮಾಡಲಾಗಿದೆ. ಇತಿಮಿತಿಯಿಲ್ಲದ ರೀತಿಯಲ್ಲಿ ದಂಡಗಳ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ರಸ್ತೆಗಳ ಪರಿಸ್ಥಿತಿ, ರಸ್ತೆಗಳ ವಾಹನಾಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ವಾಹನಗಳು ಮುಂತಾದ ಅಂಶಗಳನ್ನು ಅಪಘಾತಗಳಿಗೆ ಕಾರಣ ಎಂಬುದನ್ನೇ ಈ ಮಸೂದೆ ಪರಿಗಣಿಸದಿರುವುದು ವಿಚಿತ್ರವಾಗಿದೆ.
ಪ್ರಸ್ತುತ ಮಸೂದೆಯ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗಲಿದೆ. ಬಿಡಿ ಭಾಗಗಳ ವ್ಯಾಪಾರಿಗಳು, ರಸ್ತೆ ಬದಿಯ ಸಣ್ಣ ಪುಟ್ಟ ವರ್ಕ್‌ಶಾಪ್‌ಗಳು, ರಿಪೇರಿ ಕೆಲಸಗಾರರು ಮುಂತಾದ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಮತ್ತು ಕುಶಲಕರ್ಮಿಗಳು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ “ಮೋಟಾರು ವಾಹನ (ತಿದ್ದುಪಡಿ) ಮಸೂದೆ-೨೦೧೭”ನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ದೇಶದ ಕಾರ್ಮಿಕ ವರ್ಗ ಒತ್ತಾಯಿಸಿದೆ.
ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್, ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ನಗರ ಸಮಿತಿ ಮುಖಂಡರಾದ ನಾಗೇಶ್ ಕೋಟ್ಯಾನ್, ಮುಹಮ್ಮದ್ ಅನ್ಸಾರ್ ಮುಂತಾದವರು ಉಪಸ್ಥಿತರಿದ್ದರು.

Leave a Comment