ಮೊಹಮ್ಮದ್‌ ಶಮಿಗೆ ವೀಸಾ ನೀಡಲು ಯುಎಸ್‌ ಒಪ್ಪಿಗೆ

ನವದೆಹಲಿ, ಜು 27 – ಮುಂಬರುವ ವೆಸ್ಟ್‌ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಅಮೆರಿಕಾ ವೀಸಾ ಕೊಡಿಸುವಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ.

ಕೌಟುಂಬಿಕ ಹಿಂಸಾಚಾರ ಮತ್ತು ಪೊಲೀಸ್‌ ದಾಖಲೆಗಳಿರುವ ಹಿನ್ನೆಲೆಯಲ್ಲಿ ಮೊಹಮ್ಮದ್‌ ಶಮಿ ಅವರಿಗೆ ವೀಸಾ ನೀಡಲು ಯುಎಸ್‌ ನಿರಾಕರಿಸಿತ್ತು. ಆದ್ದರಿಂದ ಬಿಸಿಸಿಐ ಅಲ್ಲಿನ ರಾಯಭಾರಿ ಕಚೇರಿಗೆ ಪತ್ರ ಬರೆಯುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಬಿಸಿಸಿಐ ಕಾರ್ಯಕಾರಿ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮೊಹಮ್ಮದ್‌ ಶಮಿ ಅನೈತಿಕ ಸಂಬಂಧ ಮತ್ತು ಕೌಟುಂಬಿಕ ಹಿಂಸಾಚಾರ ಬಗ್ಗೆ ಮೊಹಮ್ಮದ್‌ ಶಮಿ ವಿರುದ್ಧ ಪತ್ನಿ ಜಹಾನ್‌ ಆರೋಪ ಮಾಡಿದ್ದರು. ಇದಾದ ಬಳಿಕ ಶಮಿ ಮತ್ತು ಅವರ ಪತ್ನಿ ಹಸೀನ್ ಜಹಾನ್ ಬೇರ್ಪಟ್ಟಿದ್ದರು. ಕೋಲ್ಕತ್ತಾದಲ್ಲಿ ಶಮಿ ವಿರುದ್ಧ ಜಹಾನ್ ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಇವರಿಬ್ಬರ ವಿಚ್ಛೇದನ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿದೆ.

ಈ ಹಿಂದೆ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಉಂಟಾದ ಪ್ರಕ್ಷುಬ್ಧತೆಯು ಅವರ ಫಿಟ್‌ನೆಸ್ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಹಾಗಾಗಿ, ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು.

“ಕಳೆದ ವರ್ಷ ನನಗೆ ಕೆಲವು ಕುಟುಂಬ ಸಮಸ್ಯೆಗಳಿದ್ದವು. ಫಿಟ್‌ನೆಸ್ ಪರೀಕ್ಷೆಯು ಸರಿಯಾಗಿ ಆಗಿರಲಿಲ್ಲ ಮತ್ತು ವಿಫಲನಾಗಿದ್ದೇನೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಆ ಮನಸ್ಸಿನ ಚೌಕಟ್ಟಿನಲ್ಲಿಯೂ ನಾನು ಇರಲಿಲ್ಲ. ಆ ಸಮಯದಲ್ಲಿ ಯೋ-ಯೋ ಪರೀಕ್ಷೆಗೆ ಒಳಗಾಗಬೇಕಾಗಿತ್ತು. ಫಿಟ್‌ನೆಸ್‌ ಟೆಸ್ಟ್‌ ಕೂಡ ಪಾಸ್‌ ಮಾಡುವಲ್ಲಿ ವಿಫಲನಾಗಿದ್ದೆ ಎಂದು ಶಮಿ ಸುದ್ದಿಸಂಸ್ಥೆಗೆ ಹೇಳಿಕೊಂಡಿದ್ದಾರೆ.

ಆಗಸ್ಟ್‌ 3 ರಿಂದ ಭಾರತದ ವೆಸ್ಟ್‌ ಇಂಡೀಸ್‌ ಪ್ರವಾಸ ಶುರುವಾಗಲಿದೆ.  ಮೂರು ಟಿ-20, ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಮುಖಾಮುಖಿಯಾಗಲಿವೆ.

 

Leave a Comment