ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್ ಬಿಜೆಪಿ ಟೀಕೆ

 

ನವದೆಹಲಿ, ಏ. ೩- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಲಾಕ್‌ಡೌನ್‌ನಲ್ಲೂ ತಪ್ಪು ಹುಡುಕುವ ಮೂಲಕ ಕೊಳಕು ರಾಜಕಾರಣ ನಡೆಸಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಸರ್ಕಾರ ಪೂರ್ವಸಿದ್ಧತೆ ಇಲ್ಲದೆ ಲಾಕ್‌ಡೌನ್ ಘೋಷಿಸಿದೆ. ಇದರಿಂದ ಗೊಂದಲ ಸೃಷ್ಟಿಯಾಗಿ ಲಕ್ಷಾಂತರ ಬಡವರು, ಕೂಲಿ ಕಾರ್ಮಿಕರು, ವಲಸಿಗರು, ರೈತರು ಸಂಕಷ್ಟ ಅನುಭವಿಸುವಂತಾಯಿತು. ಇದು ಮೋದಿ ಸರ್ಕಾರಕ್ಕೆ ಕಪ್ಪು ಕಲೆಯಾಗಿ ಉಳಿಯಲಿದೆ ಎಂದು ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷರ ಈ ಟೀಕೆ ವಿರುದ್ದ ಹರಿಹಾಯ್ದಿರುವ ಕೇಂದ್ರ ಗೃಹ ಸಚಿವ ಅಮಿತ್‌ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೋವಿಡ್-19 ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸೋನಿಯಾಗಾಂಧಿ ಕೊಳಕು ರಾಜಕಾರಣ ಮಾಡುತ್ತಿದ್ದಾರೆ. ಅವರ ಈ ಹೇಳಿಕೆ ಅಸಮಂಜಸ ಎಂದು ಟೀಕಿಸಿ, ಸೂಕ್ಷ್ಮತೆ ಇಲ್ಲದವರಿಂದ ಮಾತ್ರ ಈ ರೀತಿಯ ಹೇಳಿಕೆಗಳು ಹೊರಬರುತ್ತವೆ ಎಂದು ಹರಿಹಾಯ್ದಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಇಡೀ ದೇಶ ಕೊರೊನಾ ಸೋಂಕಿನ ವಿರುದ್ದ ಹೋರಾಟ ನಡೆಸಿದೆ. 130 ಕೋಟಿ ಭಾರತೀಯರೆಲ್ಲಾ ಒಗ್ಗಟ್ಟಾಗಿ ಕೋವಿಡ್-19 ಮಹಾಮಾರಿಯನ್ನು ಸೋಲಿಸಲು ಪ್ರಯತ್ನ ನಡೆಸಿದ್ದರೆ ಕಾಂಗ್ರೆಸ್ ಪಕ್ಷ ಕೊಳಕು ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ದೇಶದ ಹಿತಾಸಕ್ತಿಯನ್ನು ಕಾಪಾಡುವ ಅತ್ಯಂತ ಸೂಕ್ಷ್ಮ ಸಂದರ್ಭ ಇದಾಗಿದೆ. ಹಾಗಾಗಿ ಕಾಂಗ್ರೆಸ್ ಅಧ್ಯಕ್ಷರು ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ ಎಂದು ಇವರಿಬ್ಬರು ಪ್ರತ್ಯೇಕ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದೇಶವು ಕೊರೊನಾ ಸೋಂಕಿನ ವಿರುದ್ದ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಪ್ರಥಮ ಕುಟುಂಬ ಕೆಲ ಕಾಲ ತಮ್ಮ ಬಾಯಿಯನ್ನು ಕ್ವಾರಂಟೈನ್‌ನಲ್ಲಿ ಇಟ್ಟುಕೊಳ್ಳುವುದು ಅವಶ್ಯವಿದೆ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಅವರು ಕೋವಿಡ್-19 ವಿರುದ್ಧ ಸಮರ ಸಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ಮಹಾಮಾರಿ ವಿರುದ್ದ ಹೋರಾಟ ನಡೆಸಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದು ಅವಶ್ಯವಿದೆ. ಅನಗತ್ಯ ಟೀಕೆ ಸಲ್ಲದು ಎಂದು ನಡ್ಡಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ದೆ, ಕಾಂಗ್ರೆಸ್ ಅಧ್ಯಕ್ಷರ ಟೀಕೆ ಬೇಸರ ಹಾಗೂ ನೋವು ತರಿಸಿದೆ. ದೇಶ ಈಗ ಒಂದು ಕಠಿಣ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷಗಳು ನಕಾರಾತ್ಮಕ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Leave a Comment