ಮೊಳಕಾಲ್ಮುರಿಗೆ ಶ್ರೀರಾಮುಲು, ವಿಜಯನಗರಕ್ಕೆ ಗವಿಯಪ್ಪ ಕಂಪ್ಲಿಗೆ ಸುರೇಶ್ ಬಾಬು, ಸಂಡೂರಿಗೆ ರಾಘವೇಂದ್ರ

(ನಮ್ಮ ಪ್ರತಿನಿಧಿಯಿಂದ)
ಬಳ್ಳಾರಿ, ಏ.9: ಭಾರತೀಯ ಜನತಾಪಕ್ಷ ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯ 72 ಜನರಲ್ಲಿ ಜಿಲ್ಲೆಯ ನಾಲ್ವರಿಗೆ ಮತ್ತು 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಯಡಿಯೂರಪ್ಪ ಒಬ್ಬರಿಗೆ ಬಿಟ್ಟರೆ ರಾಜ್ಯದ ಮತ್ಯಾವ ಸಂಸದರಿಗೆ ಈ ಬಾರಿಯ ವಿಧಾನಸಭೆಗೆ ಟಿಕೆಟ್ ನೀಡಲ್ಲ ಎಂದಿದ್ದ ಪಕ್ಷ ಈ ಬಳ್ಳಾರಿ ಸಂಸದ ಬಿ.ಶ್ರೀರಾಮುಲುಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅಲ್ಲಿ ಕಳೆದ ಬಾರಿ ಶ್ರೀರಾಮುಲು ಸ್ಥಾಪನೆ ಮಾಡಿದ್ದ ಬಿಎಸ್ಆರ್ ಪಕ್ಷದಿಂದ ಎನ್.ತಿಪ್ಪೇಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಟಿಕೆಟ್ ಗೆ ಅರ್ಜಿ ಹಾಕಿದ್ದರು. ಆದರೂ ಹಾಲಿ ಶಾಸಕರಿಗೆ ಪಕ್ಷ ಟಿಕೆಟ್ ನೀಡದೆ ಶ್ರೀರಾಮುಲುಗೆ ನೀಡಿದೆ. ಶ್ರೀರಾಮುಲು ಈ ಕ್ಷೇತ್ರದಿಂದ ಆಯ್ಕೆಯಾಗಲು ಅಂತಹ ತೊಂದರೇನು ಇಲ್ಲ.

ಏಟಿಗೆ ಎದುರೇಟು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಎಸ್ಆರ್ ಶಾಸಕನಾಗಿ ಆಯ್ಕೆಯಾಗಿ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡ ಶ್ರೀರಾಮುಲು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ನಡೆದ ಉಪಚುನಾವಣೆಯಲ್ಲಿ ಶ್ರೀರಾಮುಲು ತನ್ನ ಆಪ್ತ ಓಬಳೇಶರನ್ನು ಕಣಕ್ಕಿಳಿಸಿದ್ದರು. ಮೊಳಕಾಲ್ಮುರು ಕ್ಷೇತ್ರದಲ್ಲಿ ಸೋಲುಂಡು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದಲೇ ಶ್ರೀರಾಮುಲು ಓಬಳೇಶನನ್ನು ಸೋಲಿಸಿ ಗೋಪಾಲಕೃಷ್ಣ ಸೇಡು ತೀರಿಸಿಕೊಂಡಿದ್ದರು. ಅದಕ್ಕಾಗಿ ಎಂಬಂತೆ ಈಗ ಇಲ್ಲಿಂದ ಸ್ಪರ್ಧಿಸಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಈ ಬಾರಿ ಗೆಲುವು ಪಡೆದು ಏಟಿಗೆ ಎದಿರೇಟು ನೀಡಲು ಬಿಜೆಪಿಯೇ ಶ್ರೀರಾಮುಲು ಅವರನ್ನು ಮೊಳಕಾಲ್ಮುರು ಕ್ಷೇತ್ರಕ್ಕೆ ಪಿಕ್ಸ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಹ್ಯಾಟ್ರಿಕ್

ಕಂಪ್ಲಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವ ಶ್ರೀರಾಮುಲು ಅವರ ಸೋದರ ಅಳಿಯ ಟಿ.ಹೆಚ್.ಸುರೇಶ್ ಬಾಬುಗೆ ನಿರೀಕ್ಷೆಯಂತೆ ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ವಿಜಯನಗರ

ಜಿಲ್ಲೆಯ ವಿಜಯನಗರ(ಹೊಸಪೇಟೆ) ಕ್ಷೇತ್ರದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ ಗಣಿ ಉದ್ಯಮಿ ಹೆಚ್.ಆರ್.ಗವಿಯಪ್ಪ ಅವರಿಗೆ ಟಿಕೆಟನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿರುವುದು ಕ್ಷೇತ್ರದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.
ಕಳೆದ ಎರೆಡು ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆನಂದ್ ಸಿಂಗ್ ಆಯ್ಕೆಯಾಗಿದ್ದರು. ಆದರೆ ಅವರು ಈಗ ಬಿಜೆಪಿ ಸಿದ್ದಾಂತಗಳಿಗೆ ವಿರೋಧ ವ್ಯಕ್ತ ಪಡಿಸಿ, ಕಾಂಗ್ರೆಸ್ ಅಭ್ಯರ್ಥಿಯಾಗಲು ಹೊರಟಿದ್ದಾರೆ.

ಸಂಡೂರು

ಈ ಬಾರಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ವಿಷಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕ್ಷೇತ್ರ ಸಂಡೂರು.

ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರದ ಟಿಕೆಟ್ ಗಾಗಿ ಹಲವಾರು ರೀತಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಬಂಗಾರು ಹನುಮಂತು, ಬಳ್ಳಾರಿಯ ಡಾ.ಶ್ರೀನಿವಾಸ್ ಮತ್ತು ಕೆ.ಎಸ್.ದಿವಾಕರ ಅವರನ್ನು ಮಗ್ಗುಲಿಗೆ ಸರಿಸಿ ಕಾರ್ತಿಕ್ ಘೋರ್ಪಡೆ ಅವರ ಆಶೀರ್ವಾದದೊಂದಿಗೆ ಇತ್ತೀಚೆಗಷ್ಟೆ ಪಕ್ಷ ಸೇರಿದ್ದ ಧರ್ಮಾಪುರ ರಾಘವೇಂದ್ರ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment