ಮೊರಾರ್ಜಿ ವಸತಿ ಶಾಲಾವ್ಯವಸ್ಥೆ – ಅಸಮಾಧಾನ

ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತಾಕೀತು
ರಾಯಚೂರು.ಸೆ.13- ಹಿಂದುಳಿದ ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಅವ್ಯವಸ್ಥೆಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ವಿಧಾನ ಮಂಡಲ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ, ಕರ್ತವ್ಯ ಲೋಪಕ್ಕೆ ಕಾರಣರಾದ ಸಮಾಜ ಕಲ್ಯಾಣ ತಾಲೂಕಾಧಿಕಾರಿ ಮೇಲ್ವಿಚಾರಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವಂತೆ ಸಿಇಓ ಅಭಿರಾಮ ಜಿ.ಶಂಕರ ಅವರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.
ಲಿಂಗಸೂಗೂರು, ಮಸ್ಕಿ ಹಾಗೂ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಬಾಡಿಗೆ ಕಟ್ಟಡ, ಶೌಚಾಲಯ ಇನ್ನಿತರೆ ಮೂಲ ಸೌಲಭ್ಯ ಮರೀಚಿಕೆಯಂತಾಗಿ ಪ್ರವೇಶಾತಿ ಪಡೆದ 16 ವಿದ್ಯಾರ್ಥಿನಿಯರು ಅವ್ಯವಸ್ಥೆಗೆ ಬೇಸತ್ತು ಶಿಕ್ಷಣವನ್ನೇ ಮೊಟಕುಗೊಳಿಸುವಂತಾಗಿದ್ದರೂ, ಸವಲತ್ತು ಕಲ್ಪಿಸದೇ ಕರ್ತವ್ಯಲೋಪ ಮುಂದುವರೆದಿದೆ.
ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣಾಧಿಕಾರಿಗಳ ಪುನರಾವಲೋಕನ ನಿಷ್ಕಾಳಜಿಯಿಂದಾಗಿ ಹಿಂದುಳಿದ ಹಣೆಪಟ್ಟಿಗೆ ಹೆಸರಾಂತ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿಗಳ ಸಾಕ್ಷರತಾ ಪ್ರಮಾಣ ಪಾತಾಳಕ್ಕಿಳಿಯುವಂತಾಗಿದೆ. ಸಾಕ್ಷರತಾ ಪ್ರಮಾಣ ಸುಧಾರಣೆಗಾಗಿ ಸರ್ಕಾರ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಸಹಾಯಧನ, ಕ್ಷೀರಭಾಗ್ಯ, ಬೈಸಿಕಲ್‌ನಂತಹ ಏನೆಲ್ಲಾ ಯೋಜನೆ ರೂಪಿಸಿದರೂ ಅಧಿಕಾರಿಗಳಲ್ಲಿ ಸಮನ್ವಯತೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ.49ಕ್ಕೆ ಕುಸಿತ ಕಾಣುವಂತಾಗಿದೆ.
16ಕ್ಕೂ ಮೇಲ್ಪಟ್ಟು ವಿದ್ಯಾರ್ಥಿನಿಯರು ಮೊರಾರ್ಜಿ ದೇಸಾಯಿ ವಸತಿ ಶಾಲೆ ತೊರೆಯಲು ಸ್ಪಷ್ಟ ಕಾರಣವಾದರು ಏನು? ಎಂದು ಪ್ರಶ್ನಿಸಿದ ಅವರು, ಈ ಕುರಿತು ವಾಸ್ತವ ಪರಿಶೀಲನೆಗೆ ಎಚ್ಚೆತ್ತುಕೊಳ್ಳದೇ ಹಾರಿಕೆ ಉತ್ತರ ನೀಡಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಜಂಟಿ ನಿರ್ದೇಶಕರನ್ನು ಏರು ಮಾತಿನಲ್ಲಿ ಗದರಿಸಿದರು. ಸಮುದಾಯ ಕಾರ್ಯ ನಿರ್ವಹಿಸಲು ಸರ್ಕಾರ ತಮಗೆ ವೇತನ ನೀಡುತ್ತಿದೆ. ವಹಿಸಿರುವ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಹುದ್ದೆಯಲ್ಲಿರುವುದಾದರೂ ಏತಕ್ಕೆಂದು ಗರಂ ಆದರು.
ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ 371 (ಜೆ) ಮೀಸಲಾತಿ ಕಲ್ಪಿಸಿದ್ದರೂ ಶಿಕ್ಷಣಾಭಿವೃದ್ಧಿಗೆ ಸಂಬಂಧಪಟ್ಟ ಇಲಾಖಾವಾರು ಮುಖ್ಯಾಧಿಕಾರಿಗಳೇ ಎಚ್ಚೇಳದಿದ್ದರೇ ಗುಣಾತ್ಮಕ ಶಿಕ್ಷಣ ಗತಿಯೇನು ಎಂದು ಬೇಸರಗೊಂಡರು. ಮಾನ್ವಿ, ಕಲ್ಮಲಾ, ರಾಜಲಬಂಡಾ, ಲಿಂಗಸೂಗೂರು ಹಾಗೂ ಮಸ್ಕಿ ವಸತಿ ಶಾಲೆಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಗೆ ಜಾಗೃತ ವಹಿಸದ ಜಂಟಿ ನಿರ್ದೇಶಕರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಿಗದಿತ 20 ದಿನಗಳ ಗಡುವಿನಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾಸ್ತವಸ್ಥಿತಿ ಸಂಪೂರ್ಣ ಚಿತ್ರಣದ ವಿಶೇಷ ವರದಿ ಸಲ್ಲಿಕೆ ಮಾಡುವಂತೆ ಸಿಇಓ ರವರಿಗೆ ಸ್ಪಷ್ಟವಾಗಿ ಸೂಚಿಸಿದರು.
ಅರಿವು ಶೈಕ್ಷಣಿಕ ಸಾಲ ಯೋಜನೆ ನಿಗದಿತ ಗುರಿ ಸಾಧಿಸುವಲ್ಲಿ ವಿಫಲರಾದ ಹಿಂದುಳಿದ ವರ್ಗಗಳ ಜಿಲ್ಲಾ ವ್ಯವಸ್ಥಾಪಕ ಗುಂಡಪ್ಪ ರವರನ್ನು ಸದಸ್ಯ ಆರ್.ಲೋಬೋ ರವರು ತೀವ್ರ ತರಾಟೆಗೆ ತೆಗೆದುಕೊಂಡರು. ಮಹತ್ವದ ಅರಿವು ಯೋಜನೆ ಮಾರ್ಗಸೂಚಿ ಕುರಿತು ಸಭೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಶೇ.56 ರ ನಿಗದಿತ ಪ್ರಮಾಣದಲ್ಲಿ ಶೇ.18 ರಷ್ಟು ಮಾತ್ರ ಗುರಿ ಸಾಧಿಸಿದರೇ ಅರ್ಹ ವಿದ್ಯಾರ್ಥಿಗಳಿಗೆ ಉದ್ದೇಶಿತ ಯೋಜನೆ ಸದುಪಯೋಗವಾಗುವುದಾದರೂ ಹೇಗೆ?
ಸಿಂಹಾಸನ ಮೇಲೆ ಕೂತು ಅಸಂಬದ್ಧ ಮಾಹಿತಿಯೊಂದಿಗೆ ಸಭೆಗೆ ಹಾರಿಕೆ ಉತ್ತರ ನೀಡಿ ನುಣುಚಿಕೊಳ್ಳುವ ಪ್ರವೃತ್ತಿ ಬದಲಿಸಿಕೊಳ್ಳದಿದ್ದದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ನಿರ್ದೇಶನ ನೀಡುವ ಕಟ್ಟಾಜ್ಞೆ ನೀಡಿದರು. ಪ್ರತಿ ತಾಲೂಕಿನಲ್ಲಿರುವ ವಸತಿ ನಿಲಯ ನಿರ್ವಹಣಾ ಭದ್ರತೆಗಾಗಿ ನೋಡಲ್ ಅಧಿಕಾರಿ ಹಾಗೂ ನರ್ಸ್‌ಗಳು ನಿಯುಕ್ತಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸದಸ್ಯರಾದ ಕೆ.ಎಂ.ತಿಮ್ಮರಾಯಪ್ಪ, ಯು.ಬಿ.ಬಣಕಾರ್, ಕೆ.ಅಬ್ದುಲ್ ಜಬ್ಬರ್, ಸೈಯದ್ ಮುದೀರ್, ಲಕ್ಷ್ಮೀನಾರಾಯಣ, ವಿದ್ಯಾಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment