ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ

ರದ್ದುಪಡಿಸಿದ್ದಲ್ಲಿ ಹೋರಾಟ ಎಚ್ಚರಿಕೆ
ರಾಯಚೂರು.ಮೇ.15- ಗಬ್ಬೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೇ. 75 ರಷ್ಟು ಪರಿಶಿಷ್ಟ ಜಾತಿ ಮಕ್ಕಳು ಓದುತ್ತಿದ್ದರು. 13 ವರ್ಷ ಗತಿಸಿದರೂ ಸ್ವಂತ ಸರಕಾರಿ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯವಿಲ್ಲದೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆಂದು ದಲಿತ ಮುಖಂಡ ರಾಜಪ್ಪ ಸಿರವಾರಕರ್ ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ 2015 ರಲ್ಲಿ ಸರ್ವೆ. ನಂ. 893 ರಲ್ಲಿ 12 ಎಕರೆ 17 ಗುಂಟೆ ಸರಕಾರಿ ಗೈರಾಣ ಭೂಮಿಯಲ್ಲಿ ಜಿಲ್ಲಾಧಿಕಾರಿ 8 ಎಕರೆ 17 ಗುಂಟೆ ಭೂಮಿಯನ್ನು ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಿದರು. 16 ಕೋಟಿ 32 ಲಕ್ಷ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ದೇವದುರ್ಗ ಶಾಸಕರು 101 ಕೋಟಿ ರೂ. ಕಾಮಗಾರಿ ಶಂಕು ಸ್ಥಾಪನೆ ಹಾಗೂ ಅಡಿಗಲ್ಲು ಉದ್ಘಾಟನೆ ನೆರವೇರಿಸಿದರು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬುಡ್ಡನಗೌಡ ಜಾಗಟಗಲ್ ಅವರು ಗಬ್ಬೂರು ಗ್ರಾಮದ ಸಾವಿತ್ರಮ್ಮ ಗಂಡ ಸೂಗೂರಯ್ಯ ಇವರಿಗೆ ಅಕ್ರಮ-ಸಕ್ರಮ ಸಮಿತಿಯಲ್ಲಿ ಸರ್ವೆ. ನಂ. 896 ಬಿ ಯಲ್ಲಿ 3 ಎಕರೆ ಮಂಜೂರು ಮಾಡಿದೆ. ಕಳೆದ ವಾರ ಪತ್ರಿಕಾ ಗೋಷ್ಟಿಯಲ್ಲಿ ತಕರಾರು ಮಾಡಿರುವುದನ್ನು ಖಂಡಿಸಲಾಗುತ್ತದೆ. ಸರ್ವೆ ನಂ. 893 ಬಿ ಎಕರೆಯಲ್ಲಿ ನಡೆದ ಕಾಮಗಾರಿಗೂ ಸಾವಿತ್ರಮ್ಮ ನೀಡಿದ ಸರ್ವೆ ನಂ.896 ಬಿ. ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ದಲಿತ ಜನಾಂಗದ ವಿದ್ಯಾರ್ಥಿಗಳು ಕಲಿಯಬಾರದೆಂದು ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಬುಡ್ಡನಗೌಡ ಮಾಡುತ್ತಿದ್ದಾರೆಂದು ದೂರಿದರು.
ಶಾಲಾ ನಿರ್ಮಾಣ ಕಾಮಗಾರಿ ಅಡ್ಡಿಪಡಿಸಿ 2007-08 ರಲ್ಲಿ ಗಬ್ಬೂರು ಗ್ರಾಮದ ಭೂರಹಿತ ದಲಿತರಿಗೆ ಸರ್ವೆ ನಂ. 753 ರಲ್ಲಿ 96 ಎಕರೆ ಭೂಮಿಯನ್ನು 22 ಫಲಾನುಭವಿಗಳಿಗೆ ಸರಕಾರ ಹಂಚಿದ ಭೂಮಿಯನ್ನು ದಿ.ವಿರುಪಾಕ್ಷಪ್ಪಗೌಡ ರಾಮದುರ್ಗ 96 ಎಕರೆ ಭೂಮಿ ಕಸಿದುಕೊಂಡಾಗ ಬಡವರ ಪರವಾಗಿ ಬುಡ್ಡನಗೌಡ ಏಕೆ ಧ್ವನಿಯೆತ್ತಲಿಲ್ಲ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಮೊರಾರ್ಜಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ರದ್ದುಪಡಿಸಿದ್ದಾದರೆ ದಲಿತ ಸಂಘಟನೆಗಳ ವೇದಿಕೆ ಹಾಗೂ ಟಿಪ್ಪು ಸುಲ್ತಾನ ಸಂಘದಿಂದ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಫಾರೂಕ್ ಗೌಡ, ಶಾಂತಕುಮಾರ ಹೊನ್ನಟಗಿ, ಮರಿಯಪ್ಪ ಮುದುಕಲ್, ಹನುಮಂತ ಗಣೇಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment