ಮೊಬೈಲ್ ಅಪರಾಧ ಪತ್ತೆಗೆ ಕ್ರಮ

ಬೆಂಗಳೂರು, ಅ. ೩- ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್‌ಗಳಿಂದಾಗುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮೊಬೈಲ್ ಅಪರಾಧ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲು ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ತಿಳಿಸಿದರು.
ಮೊಬೈಲ್ ಕಳವು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕಳವು ಮಾಡಿದ ಮೊಬೈಲ್ ಡೇಟಾ ತೆಗೆಯುವುದು, ಇಎಂಇಐ ಸಂಖ್ಯೆ ಬದಲಾಯಿಸುವುದು ಇನ್ನಿತರ ಮೊಬೈಲ್ ಅಪರಾಧಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಿಂದ ಒಂದಲ್ಲ ಒಂದು ರೀತಿಯ ಅಪಘಾತಗಳು ನಡೆಯುತ್ತವೆ. ಇದನ್ನು ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನ ತರಬೇತಿ ಅಗತ್ಯವಾಗಿದ್ದು, ಕೆಲ ಸಿಬ್ಬಂದಿಗೆ ತರಬೇತಿ ನೀಡಿ ಮೊಬೈಲ್ ಅಪರಾಧ ಪತ್ತೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಪಿಎಸ್ ಬಳಕೆ
ಮೊಬೈಲ್ ಉತ್ಪಾದನಾ ವೇಳೆಯೇ ಅವುಗಳಿಗೆ ಜಿಪಿಎಸ್ ಅಳವಡಿಸುವಂತೆ ಮೊಬೈಲ್ ಕಂಪನಿಗಳಿಗೆ ಪತ್ರ ಬರೆಯಲಾಗುವುದು. ಮೊಬೈಲ್ ತಯಾರಿಕೆಯಲ್ಲಿಯೇ ಜಿಪಿಎಸ್ ಅಳವಡಿಸುವುದರಿಂದ ಮೊಬೈಲ್ ಕಳವು ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚಲು ಸಹಾಯವಾಗಲಿದೆ ಎಂದು ಹೇಳಿದರು.
ಸಿಮ್‌ಗಳ ಮೇಲೆ ಕಣ್ಣು
ನಗರದ ಸಣ್ಣಪುಟ್ಟ ಅಂಗಡಿಗಳಲ್ಲೂ ಸಿಮ್‌ಗಳನ್ನು ನೆಪ ಮಾತ್ರಕ್ಕೆ ಆಧಾರ್ ಕಾರ್ಡ್ ಪಡೆ ನೀಡಲಾಗುತ್ತಿದೆ. ಒಬ್ಬರು 10 ರಿಂದ 100ರವರೆಗೆ ಸಿಮ್‌ಕಾರ್ಡ್‌ ತೆಗೆದುಕೊಂಡಿರುವುದು ಕಂಡು ಬಂದಿದೆ. ಇದರ ಬಗ್ಗೆಯೂ ಇಲಾಖೆ ಕಣ್ಣಿಡಲಾಗಿದೆ.
ಸಿಮ್ ಮಾರಾಟ ಮಾಡುವಾಗ ಹೆಚ್ಚಿನ ಜವಾಬ್ದಾರಿ ಅಂಗಡಿ ಮಾಲೀಕರಿಗಿರಬೇಕು. ಇಲ್ಲದಿದ್ದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದರು.
ವಿಮೆ ಮಾಡಿಸಿ
ಮೊಬೈಲ್ ಖರೀದಿಸುವವರು ಅವುಗಳಿಗೆ ವಿಮೆ ಮಾಡಿಸಿದರೆ ಕಳವು ನಾಪತ್ತೆಯಾದಾಗ ಸ್ವಲ್ಪ ಹಣವಾದರೂ ಸಿಗುತ್ತದೆ. ಮೊಬೈಲ್ ಖರೀದಿಸುವವರು ಅವುಗಳಿಗಿ ವಿಮೆ ಮಾಡುವುದನ್ನು ಮರೆಯಬಾರದು ಎಂದು ಮನವಿ ಮಾಡಿದರು.
ಮೊಬೈಲ್ ಕಳವು-ಸುಲಿಗೆ ನಗರದಲ್ಲಿ ಹಾವಳಿಯಾಗಿ ಪರಿಣಮಿಸಿದೆ. ಈ ವರ್ಷದ ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ 79,618 ಮೊಬೈಲ್ ಕಳವು, ನಾಪತ್ತೆ ದೂರುಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.

Leave a Comment