ಮೊಬೈಲ್ ಅಂಗಡಿಯಲ್ಲಿ ಕಳವು ಅಂತಾರಾಜ್ಯ ಕಳವು ಆರೋಪಿಗಳ ಸೆರೆ

ಉಡುಪಿ, ಡಿ.೩- ನಗರದ ತ್ರಿವೇಣಿ ಜಂಕ್ಷನ್ ಬಳಿಯ ಪ್ಲೇ ಜೋನ್ ಎಂಬ ಮೊಬೈಲ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರು ಡಿ.೧ರಂದು ಬಂಧಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ರಜಾಕ್ ಅಸ್ಲಾಂ ಮುಜಾವರ್(೨೦), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಜಾ ಸಾಬ್ ನಾಯಕ್(೨೫), ಬಿಹಾರ ರಾಜ್ಯದ ಶಿವಾನ್ ಜಿಲ್ಲೆಯ ದೀಪಕ್ ಪ್ರಸಾದ್(೨೫) ಬಂಧಿತ ಆರೋಪಿಗಳು. ಆರೋಪಿಗಳು ನ.೫ರಂದು ರಾತ್ರಿ ವೇಳೆ ಪ್ಲೇ ಜೋನ್ ಮೊಬೈಲ್ ಅಂಗಡಿಗೆ ನುಗ್ಗಿ ೮,೩೪,೯೯೦ರೂ. ಮೌಲ್ಯದ ಮೊಬೈಲ್ ಫೋನ್‌ಗಳು ಹಾಗೂ ನಗದು ಕಳವುಗೈದಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಉಡುಪಿ ಎಸ್ಪಿ ನಿಶಾ ಜೇಮ್ಸ್ ಆದೇಶ ದಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಟಿ.ಆರ್.ಜೈಶಂಕರ್ ಮಾರ್ಗ ದರ್ಶನದಲ್ಲಿ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ತಂಡ ರಚಿಸಿದ್ದರು. ಬಂಧಿತರಿಂದ ೩,೦೦,೦೦೦ರೂ. ಮೌಲ್ಯದ ೧೬ ಮೊಬೈಲ್‌ಗಳು, ೨೨,೦೦೦ ರೂ. ನಗದು ಹಾಗೂ ಕಳವಿಗೆ ಬಳಸಿದ ಒಂದು ಕಬ್ಬಿಣದ ಸ್ಕ್ರೂ ಡ್ರೈವರ್, ಒಂದು ಕಟ್ಟಿಂಗ್ ಪ್ಲೇರ್, ಬೆನ್ನಿಗೆ ಹಾಕುವ ಎರಡು ಬ್ಯಾಗ್, ಮೂಗಿಗೆ ಕಟ್ಟುವ ಒಂದು ಮಾಸ್ಕ್, ತಲೆಗೆ ಹಾಕುವ ಬಟ್ಟೆಯ ಕ್ಯಾಪ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಈ ತಂಡದಲ್ಲಿ ಮಲ್ಪೆ ಠಾಣಾ ಎಸ್ಸೈ ತಿಮ್ಮೇಶ್, ಎಎಸ್ಸೈ ರವಿಚಂದ್ರ ಹಾಗೂ ಸಿಬ್ಬಂದಿ ಡಿಸಿಐಬಿಯ ರಾಮು ಹೆಗ್ಡೆ, ರಾಘವೇಂದ್ರ, ಉಡುಪಿ ನಗರ ಠಾಣೆಯ ಲೋಕೇಶ್, ಬಾಲಕೃಷ್ಣ, ಇಮ್ರಾನ್, ಸಂತೋಷ್ ರಾಥೋಡ್ ಇದ್ದರು.

Leave a Comment