ಮೊಣಗಂಟಿನ ನೋವನ್ನು ಒಂದೇ ವಾರದಲ್ಲಿ ಕಡಿಮೆಗೊಳಿಸುವ ಮನೆಮದ್ದುಗಳು

ನಮ್ಮ ದೇಹದ ತೂಕ ಹೆಚ್ಚಾಗಿ ಕಾಲುಗಳ ಎರಡು ಗಂಟುಗಳ ಮೇಲೆ ಬೀಳುತ್ತದೆ. ಪಾದ ಹಾಗೂ ಮೊಣಗಂಟು. ಆದರೆ ಮೊಣಗಂಟಿನ ಮೇಲೆ ಬಗ್ಗುವಾಗ ಹಾಗೂ ಏಳುವಾಗ ಹೆಚ್ಚು ಒತ್ತಡ ಬೀಳುವ ಕಾರಣ ಈ ಭಾಗಕ್ಕೆ ಸದಾ ಅಪಾಯ ಕಾದಿರುತ್ತದೆ. ಎಲ್ಲಿಯವರೆಗೆ ನಿಮಗೆ ಯಾರದೇ ಸಹಾಯವಿಲ್ಲದೇ ಏಳಲು ಸಾಧ್ಯವೋ ಅಲ್ಲಿಯವರೆಗೆ ಈ ಗಂಟುಗಳು ಆರೋಗ್ಯಕರವಾಗಿದೆ ಎಂದು ತಿಳಿದುಕೊಳ್ಳಬಹುದು. ಯಾವಾಗ ಈ ಗಂಟಿನಲ್ಲಿ ಕೊಂಚವಾದರೂ ನೋವು ಎದುರಾದಾಗ ಈ ಭಾಗದಲ್ಲಿ ಸವೆತ ಶುರುವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ನಿತ್ಯದ ಚಟುವಟಿಕೆಗಳು ಕಷ್ಟಕರವಾಗಲಿವೆ ಎಂಬುದನ್ನು ಮನಗಾಣಬೇಕು. ಅಮೆರಿಕಾದ ಶಿಕಾಗೋ ನಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ಮೊಣಗಂಟಿನ ಭಾಗಗಳನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳಲು ಹಾಗೂ ಸವೆತವನ್ನು ನಿಧಾನಗೊಳಿಸಲು ಉತ್ತಮ ಆಹಾರಕ್ರಮ, ಕಡಿಮೆ ತೂಕ ಹಾಗೂ ನಿಯಮಿತ ವ್ಯಾಯಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ವಿಜ್ಞಾನಿಗಳು ಕರೆನೀಡಿದರು.
ನೋವಿಲ್ಲದಂತಿರಲು ಕೇವಲ ವ್ಯಾಯಾಮ ಮಾತ್ರ ಸಾಲದು ಎಂದು ಒಂದು ಸಂಶೋಧನೆ ತಿಳಿಸುತ್ತದೆ. ನಮ್ಮ ಮೊಣಗಂಟಿನಲ್ಲಿರುವ ಮೂಳೆಗಳ ಭಾಗ ಹಾಗೂ ಇವುಗಳನ್ನು ಚಲಿಸಲು ನೆರವಾಗುವ ಮೃದುವಾದ ಭಾಗಗಳು ಸತತ ಚಲನೆಯಿಂದ ಸವೆಯುತ್ತವೆ. ಅರವತ್ತು ವರ್ಷ ದಾಟಿದ ವ್ಯಕ್ತಿಗಳಲ್ಲಿ ಮೂರರಲ್ಲಿ ಒಂದು ಭಾಗದಷ್ಟು ಜನರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸವೆತ ಹೀಗೆ ಮುಂದುವರೆಯುತ್ತಾ ನಿಲ್ಲಲೂ, ಆಗದಷ್ಟು ಮಟ್ಟಿಗೆ ನೋವುಂಟು ಮಾಡಿ, ಬಳಿಕ ಮೊಣಕಾಲಿನ ಗಂಟನ್ನೇ ಬದಲಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.
ರೋಗಿಗಳ ಮೊಣಗಂಟುಗಳಲ್ಲಿರುವ ಮೃದುಭಾಗವಾದ ಕಾರ್ಟಿಲೇಜ್ ಪೂರ್ಣವಾಗಿ ಸವೆದ ಬಳಿಕ ಈ ತೊಂದರೆಯನ್ನು ಮತ್ತೆ ಮೊದಲಿನಂತಾಗಿಸಲು ಸಾಧ್ಯವಿಲ್ಲ” ಎಂದು ಕ್ಯಾಲಿಫೋರ್ನಿಯಾ-ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಲೇಖಕರಾಗಿರುವ ಅಲೆಕ್ಸಾಂಡ್ರಾ ಜೆರ್ಸಿಂಗ್ ರವರು ತಿಳಿಸಿದ್ದಾರೆ. ಈ ಸವೆತ ದೇಹದ ತೂಕವನ್ನು ನೇರವಾಗಿ ಅವಲಂಬಿಸಿದ್ದು ದೇಹದ ತೂಕ ಹೆಚ್ಚಿದ್ದಷ್ಟೂ ಸವೆತವೂ ಹೆಚ್ಚುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳುವ ಮೂಲಕ ಸವೆತವನ್ನೂ ಕಡಿಮೆ ಮಾಡಬಹುದು.
ಮೊಣಕಾಲು ನೋವನ್ನು ಕಡಿಮೆ ಮಾಡಿಕೊಳ್ಳಲು ಮನೆ ಮದ್ದುಗಳೂ ಸಹಾಯಕ್ಕೆ ಬರಲಿವೆ.
ಒಂದು ವೇಳೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಿಕ್ಕಚಮಚ ಅರಿಶಿನ ಬೆರೆಸಿ ಕುಡಿಯುವುದರಿಂದಲೂ ಹೆಚ್ಚಿನ ಲಾಭವಿದೆ.
ಹಸಿಶುಂಠಿಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಉತ್ತಮವಾದ ಉರಿಯೂತ ನಿವಾರಕವೂ ಆಗಿದೆ. ನಿಮ್ಮ ನಿತ್ಯದ ಆಹಾರಗಳಲ್ಲಿ ಕೊಂಚ ಪ್ರಮಾಣದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳುವ ಮೂಲಕ ಮೊಣಗಂಟಿನ ನೋವನ್ನು ದೂರವಾಗಿಸಬಹುದು. ದಿನದಲ್ಲಿ ಎರಡರಿಂದ ಮೂರು ಕಪ್ ಶುಂಠಿ ಬೆರೆಸಿದ ಟೀ ಕುಡಿಯುವುದರಿಂದಲೂ ನೋವು ಕಡಿಮೆಯಾಗಲಿದೆ. ಮೊಣಗಂಟುಗಳಲ್ಲಿ ನೋವು ಪ್ರಾರಂಭವಾಗಿದ್ದರೆ ಈ ಭಾಗದ ಮೇಲೆ ಶುಂಠಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ನೋವು ಶಮನವಾಗಲಿದೆ.
ಸುಮಾರು ಎರಡು ಚಿಕ್ಕ ಚಮಚದಷ್ಟು ಮೆಂತೆಕಾಳುಗಳನ್ನು ಕೊಂಚ ನೀರಿನಲ್ಲಿ ರಾತ್ರಿಯಿಡಿ ನೆನೆಸಿಟ್ಟು. ಮರುದಿನ ಬೆಳಿಗ್ಗೆ ನೀರನ್ನು ಸಂಗ್ರಹಿಸಿ ಕುಡಿಯಿರಿ. ಇದರಿಂದ ಮೊಣಕಾಲುಗಳಿಗೆ ಹೆಚ್ಚಿನ ಶಾಖ ದೊರಕುತ್ತದೆ ಹಾಗೂ ನೋವನ್ನು ಕ್ಷಿಪ್ರವಾಗಿ ಕಡಿಮೆಗೊಳಿಸಲು ನೆರವಾಗುತ್ತದೆ. ಸಾಧ್ಯವಾದರೆ ನೀರು ಸಂಗ್ರಹಿಸಿದ ಬಳಿಕ ಉಳಿದ ಮೆಂತೆಕಾಳುಗಳನ್ನು ಅರೆದು ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕು.
ಎಳ್ಳಿನಲ್ಲಿಯೂ ತಾಮ್ರದ ಸಹಿತ ಹಲವು ಅವಶ್ಯಕ ಖನಿಜ ಉತ್ತಮ ಪ್ರಮಾಣದದಲ್ಲಿವೆ. ಇದರೊಂದಿಗೆ ಸೆಸಮಾಲ್ ಎಂಬ ಪೋಷಕಾಂಶವೂ ಇದ್ದು ಇದರ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣ ಹಲವು ವಿಧದಲ್ಲಿ ನೋವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ನಿತ್ಯವೂ ಎಳ್ಳಿನ ಬೀಜಗಳನ್ನು ಆಹಾರದೊಂದಿಗೆ ಬೆರೆಸಿ ಸೇವಿಸುವ ಮೂಲಕ ಹಾಗೂ ಎಳ್ಳೆಣ್ಣೆಯಿಂದ ನಿತ್ಯವೂ ನೋವಿರುವ ಭಾಗವನ್ನು ಮಸಾಜ್ ಮಾಡಿಕೊಳ್ಳುವ ಮೂಲಕ ಮೊಣಕಾಲ ನೋವು ಹಾಗೂ ಸಂಧಿವಾತ ಬರದಂತೆ ತಡೆಯಬಹುದು.
ಈರುಳ್ಳಿಯೂ ಉತ್ತಮವಾದ ಉರಿಯೂತ ನಿವಾರಕವಾಗಿದೆ. ಇದರಲ್ಲಿರುವ ಫೋಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸಿ ದೇಹದ ಹಲವು ಬಗೆಯ ಉರಿಯೂತದ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಅಲ್ಲದೇ ಈರುಳ್ಳಿಯಲ್ಲಿರುವ ಗಂಧಕದ ಪ್ರಮಾಣ ದೇಹದ ಮೂಳೆ ಸಂಧುಗಳ ನೋವನ್ನು ಕಡಿಮೆ ಮಾಡಲೂ ನೆರವಾಗುತ್ತದೆ.

Leave a Comment